

ಅರಸೀಕೆರೆ: ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ ದಾರ್ಶನಿಕರಲ್ಲಿ ಬಸವೇಶ್ವರರು ಅಗ್ರಗಣ್ಯರಾಗಿದ್ದಾರೆ ಎಂದು ಸುತ್ತೂರು ಮಹಾಸಂಸ್ಥಾನದ ಜಗದ್ಗುರು ಡಾ.ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಹೇಳಿದರು. ತಾಲೂಕಿನ ಮಾಡಾಳು ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಲಿಂಗೈಕ್ಯ ಶ್ರೀಚಂದ್ರಶೇಖರ ಸ್ವಾಮೀಜಿಯವರ 16 ನೇ ವರ್ಷದ ಸಂಸ್ಮರಣೆ ಹಾಗೂ 23 ವರ್ಷದ ಜನಜಾಗೃತಿ ಧಾರ್ಮಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮೇಲು,ಕೀಳು,ಸ್ತ್ರೀ ಪುರುಷ ಎನ್ನುವ ತಾರತಮ್ಯವಿಲ್ಲದೇ ಎಲ್ಲರನ್ನು ಸಮಾನಾಗಿ ಕಾಣುವ ಮೂಲಕ ಸಮಾಜಮುಖಿ ಚಿಂತನೆಗಳನ್ನು ಪ್ರತಿಪಾದಿಸಿದ್ದರು. ಸಾಮಾನ್ಯ ಜನರಾಡುವ ಮಾತುಗಳನ್ನು ದೈವವಾಣಿಯನ್ನಾಗಿ ಪರಿವರ್ತಿಸಿದ ಕೀರ್ತಿ ಹನ್ನೆರಡನೇ ಶತಮಾನದ ಬಸವಾದಿ ಶಿವಶರಣರಿಗೆ ಸಲ್ಲುತ್ತದೆ.ಮನುಷ್ಯ ಭಗವಂತನ ನಡುವಿನ ಸಂಬಂಧ ಹೇಗಿರಬೇಕು ಎನ್ನುವುದು ವಚನಗಳಲ್ಲಿ ಅಡಗಿದೆ. ಮನುಕುಲದ ಉದ್ಧಾರಕ್ಕೆ ಶ್ರಮಿಸಿದ ಮಹಾಪುರಷರನ್ನು ಸ್ಮರಿಸುವ ಜತೆಗೆ ಅವರ ಕಾಯಕವೇ ಕೈಲಾಸ ಎನ್ನುವ ತತ್ವ, ಚಿಂತನೆ, ಆದರ್ಶಗಳನ್ನು ಮೈಗೂಡಿಸಿಕೊಂಡಲ್ಲಿ ಸಾರ್ಥಕ ಜೀವನದ ಕ್ಷಣಗಳನ್ನು ಕಳೆಯಲು ಸಾಧ್ಯವಿದೆ.ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ಗ್ರಾಮೀಣ ಭಾಗದ ಶ್ರೀಮಠಗಳಲ್ಲಿ ಆಯೋಜನೆಗೊಳ್ಳುತ್ತಿರುವುದು ಶ್ಲಾಘನೀಯ ಎಂದು ಶ್ರೀಗಳು ಶರಣರ ಸಾಧನೆಯನ್ನು ಬಣ್ಣಿಸಿದರು.
ಸಿರಿಗೆರೆ ಸಾಣೆಹಳ್ಳಿ ಶಾಖಾ ಮಠದ ಡಾ.ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಠ, ಮಂದಿರ ಕಟ್ಟುವ ಬದಲು ಮನಸ್ಸು ಬೆಸೆಯುವ ಕಾಯಕದಲ್ಲಿ ತಲ್ಲೀನರಾಗುವ ಮೂಲಕ ಶರಣರು ಮುಂದಿನ ಪೀಳಿಗೆಗೆ ಮೆಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.ಆದರೆ ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಕೆಲ ಮಠಗಳು ಹಾಗೂ ಮಠಾಧಿಪತಿಗಳ ಮನಸ್ಸು ಕಲುಷಿತಗೊಳ್ಳುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.ಮಾತುಗಳ ಮೂಲಕವೇ ಜಗತ್ತಿನ ಉದ್ಧಾರಕ್ಕೆ ಶ್ರಮಿಸಿದವರ ಆದರ್ಶ ಬದುಕು ಎಲ್ಲರಿಗೂ ಪ್ರೇರಣೆಯಾಗಬೇಕು ಎಂದು ಕಿವಿಮಾತು ಹೇಳಿದರು.
ತಿಪಟೂರು ತಾಲೂಕಿನ ಕೆರಗೋಡಿ ರಂಗಾಪುರ ಸುಕ್ಷೇತ್ರದ ಶ್ರೀಗುರುಪರದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಲಿಂಗೈಕ್ಯ ಶ್ರೀಚಂದ್ರಶೇಖರ ಸ್ವಾಮೀಜಿಯವರ ನೇರ ನಡೆ,ನುಡಿಗಳಿಂದ ಲೋಪ ಸರಿಪಡಿಸುವ ಕೆಲಸ ಮಾಡುತ್ತಿದ್ದರು. ನ್ಯಾಯ ಮತ್ತು ನಿಷ್ಠುರತೆಯಿಂದ ನಡೆದುಕೊಳ್ಳುತ್ತಿದ್ದರಿಂದ ಭಕ್ತರ ಪ್ರೀತಿಗೆ ಪಾತ್ರರಾಗಿದ್ದರಲ್ಲದೇ ರಾಜಕಾರಣಿಗಳ ಒಡನಾಟದಿಂದ ದೂರ ಉಳಿದಿದ್ದು ಮಠ ಮಾನ್ಯಗಳ ಗೌರವ ಹೆಚ್ಚುವಂತೆ ನಡೆದುಕೊಂಡಿದ್ದಾರೆ ಎಂದು ಅವರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡರು.ಪಾಂಡೋಮಟ್ಟಿ ವಿರಕ್ತ ಮಠದ ಶ್ರೀಗುರುಬಸವ ಶ್ರೀಗಳು ಮಾತನಾಡಿ,ಲಿಂಗೈಕ್ಯ ಸಿದ್ದೇಶ್ವರ ಶ್ರೀಗಳು ಶರೀರವನ್ನು ದಹನ ಪ್ರಕ್ರಿಯೆಗೆ ಒಳಪಡಿಸುವ ಬದಲು ಆಸ್ಪತ್ರೆಗೆ ದಾನ ಮಾಡಬಹುದಾಗಿತ್ತು ಎಂದರು.
ಬಿಜೆಪಿ ಮುಖಂಡ ಎನ್.ಆರ್.ಸಂತೋಷ್ ಮಾತನಾಡಿ, ಹನ್ನೆರಡನೇ ಶತಮಾನದ ವಚನಕಾರರ ವಚನಧಾರೆಯ ಸುಧೆಯನ್ನು ಮನೆ,ಮನಗಳಿಗೆ ಕೆಲಸ ನಡೆಯಬೇಕಾಗಿದೆ.ಜತೆಗೆ ಪಾಲಕರು ಮಕ್ಕಳಿಗೆ ಅತ್ಯುನ್ನತ ಮೌಲ್ಯವುಳ್ಳ ಸಂದೇಶ ನೀಡಿದವರ ಬದುಕು ಬವಣೆ ಪರಿಚಯ ಮಾಡಿಕೊಡುವ ಅಗತ್ಯವಿದೆ ಎಂದು ಹೇಳಿದರು. ಕೋಳಗುಂದ ಕೇದಿಗೆ ಮಠದ ಶ್ರೀಜಯಚಂದ್ರಶೇಖರ ಸ್ವಾಮೀಜಿ,ಶ್ರೀರುದ್ರಮುನಿ ಸ್ವಾಮೀಜಿ, ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಜಿವಿಟಿ ಬಸವರಾಜು, ತಾಲೂಕು ಸಾಧು ವೀರಶೈವ ಲಿಂಗಾಯಿತ ಸಮಾಜದ ಅಧ್ಯಕ್ಷ ಹಿರಿಯೂರು ರೇವಣ್ಣ, ಮುಖಂಡ ಅಣ್ಣಾಯ್ಕನಹಳ್ಳಿ ವಿಜಯಕುಮಾರ್ ಇನ್ನಿತರರಿದ್ದರು.ವಿಶ್ವಾರಾಧ್ಯ ಸತ್ಯಂಪೇಟೆ ಬಸವೇಶ್ವರರ ಸಾಧನೆ ಕುರಿತು ಉಪನ್ಯಾಸ ನೀಡಿದರು.