ಜಗತ್ತಿಗೆ ಸಂಸ್ಕಾರ ನೀಡಿದ ಶ್ರೇಷ್ಠ ಭಾರತ

2303 AFZ 01
 ಅಫಜಲಪುರ ತಾಲೂಕಿನ ಬಟಗೇರಾದಲ್ಲಿ ಶ್ರೀ ಭಾಗ್ಯವಂತಿ ದೇವಿಯ ಜಾತ್ರೆ ನಿಮಿತ್ತ ಆಯೋಜಿಸಿದ್ದ ಧರ್ಮಸಭೆಯನ್ನು ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಉದ್ಘಾಟಿಸಿದರು. ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯ, ಶ್ರೀ ಅಭಿನವ ಗುರುಬಸವ ಶಿವಾಚಾರ್ಯ, ಶ್ರೀ ಡಾ.ರುದ್ರಮುನಿ ಶಿವಾಚಾರ್ಯ, ಶ್ರೀ ಭಾಗ್ಯವಂತಿ ಆಯಿ ಇತರರಿದ್ದರು.
Published on

ಅಫಜಲಪುರ: ಭಾರತವು ಇಡೀ ವಿಶ್ವಕ್ಕೆ ಸಂಸ್ಕಾರ ಹೇಳಿಕೊಟ್ಟ ಶ್ರೇಷ್ಠ ದೇಶವಾಗಿದೆ. ಆಚಾರ- ವಿಚಾರ ಹಾಗೂ ತತ್ವಗಳ ಮೂಲಕ ಜಗತ್ತಿನಲ್ಲಿಯೇ ಗಮನಸೆಳೆಯುತ್ತಿದೆ ಎಂದು ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ನುಡಿದರು.

ಬಟಗೇರಾದಲ್ಲಿ ಗ್ರಾಮ ದೇವತೆ ಶ್ರೀ ಭಾಗ್ಯವಂತಿ ದೇವಿ ಜಾತ್ರೋತ್ಸವ ನಿಮಿತ್ತ ಭಾನುವಾರ ಆಯೋಜಿಸಿದ್ದ ಧರ್ಮಸಭೆಯಲ್ಲಿ ಮಾತನಾಡಿ, ಪ್ರತಿಯೊಬ್ಬರೂ ನಾನು ಮೊದಲು ಭಾರತೀಯನೆಂಬ ಭಾವದಿಂದ ಬದುಕಬೇಕು. ಪಾಶ್ಚಾತ್ಯರು ತಮ್ಮ ದೇಹವನ್ನು ಪ್ರೀತಿಸಿದರೆ, ಭಾರತೀಯರು ದೇವರನ್ನು ಆರಾಧಿಸಿ ಭಕ್ತಿಯಲ್ಲಿ ಪರವಶರಾಗುತ್ತಾರೆ. ನಾಡಿನಲ್ಲಿ ದೈವ ಭಕ್ತಿಯಿಂದಾಗಿ ಅಪರಾಧ ಪ್ರಕರಣ ಕಡಿಮೆಯಿವೆ ಎಂದು ಅಭಿಪ್ರಾಯಪಟ್ಟರು.

ಪುರಾತನ ಕಾಲದಲ್ಲಿ ಮಠ- ಮಾನ್ಯಗಳು ಸಮಾಜಕ್ಕೆ ಶಿಕ್ಷಣ ನೀಡುವುದರ ಜತೆಗೆ ಊರಿನಲ್ಲಿನ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದವು. ಬದುಕಿನುದ್ದಕ್ಕೂ ತಂದೆ-ತಾಯಿ, ಗುರು- ಹಿರಿಯರನ್ನು ಗೌರವಿಸಬೇಕು. ಸ್ತ್ರೀ ಹಾಗೂ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮೂಲಕ ಬದುಕು ಚಿರಸ್ಮರಣೀಯವಾಗಿಸಿಕೊಳ್ಳಬೇಕು ಎಂದು ಹೇಳಿದರು.

ಶ್ರೀ ಅಭಿನವ ಗುರುಬಸವ ಶಿವಾಚಾರ್ಯ, ಶ್ರೀ ಡಾ.ಅಭಿನವ ರುದ್ರಮುನಿ ಶಿವಾಚಾರ್ಯ, ಶ್ರೀ ಭಾಗ್ಯವಂತಿ ಆಯಿ, ಪ್ರಮುಖರಾದ ಸಿದ್ರಾಮಯ್ಯ ಸ್ವಾಮಿ, ಸುರೇಶ ದೇವರು, ಅಣ್ಣಯ್ಯ ಯಡ್ರಾಮಿ, ಬಾಬುರಾವ ಪಾಟೀಲ್, ಭೀಮರಾಯ ಕಲ್ಲೂರ, ಚಂದ್ರಶೇಖರ ಪುರಾಣಿಕ, ಭೋಗನಗೌಡ ಪಾಟೀಲ್, ಸಿದ್ದುಗೌಡ ಇಟಗಾ, ಬಸವರಾಜಗೌಡ, ವಿನಾಯಕ ಮೇಲಿನಮಠ, ದತ್ತಯ್ಯ ಹಿರೇಮಠ, ನಾಗನಗೌಡ ಕೆರಕನಳ್ಳಿ, ಶಿವಲಿಂಗಯ್ಯ ಶಾಸ್ತ್ರೀ, ಸಚಿನ್ ನಿಚಮಾ, ಆಕಾಶ ಬಟಗೇರಾ, ದತ್ತಗುರು ಕೋಣಶಿರಸಗಿ ಇತರರಿದ್ದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಉಜ್ಜಯಿನಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಮೆರವಣಿಗೆಯುದ್ದಕ್ಕೂ ಮುತ್ರೈದೆಯರು ಕುಂಭ-ಕಳಸ ಹೊತ್ತು ಹೆಜ್ಜೆ ಹಾಕಿದರು. ಪುರವಂತರ, ಡೊಳ್ಳು ಕುಣಿತ, ಶಹನಾಯಿ ವಾದ್ಯ, ಚಿಟ್ಟಹಲಗೆ ಗಮನಸೆಳೆದವು.

ಹಿಂದಿನ ಕಾಲದಲ್ಲಿ ಗುರುಕುಲಗಳಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವ ಮೂಲಕ ಸಂಸ್ಕಾರವಂತರನ್ನಾಗಿ ನಿರ್ಮಿಸುತ್ತಿದ್ದವು. ಆದರೆ ಇಂದು ಕೇವಲ ಅಂಕಗಳಿಕೆಗಾಗಿ ಶಿಕ್ಷಣ ನೀಡಲಾಗುತ್ತಿದ್ದು, ನೈತಿಕ ಮೌಲ್ಯಗಳು ಕುಸಿಯುತ್ತಿವೆ. ಊರಿಗೊಂದು ಮಠವಿರಬೇಕು, ಉತ್ತಮ ಗುರುವಿರಬೇಕು. ಅಂದಾಗಲೇ ಗ್ರಾಮದಲ್ಲಿ ಒಳ್ಳೆಯ ವಾತಾವರಣವಿರುತ್ತದೆ.

| ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ, ಉಜ್ಜಯಿನಿ

ಭೀಮಾನದಿ ತಟದಲ್ಲಿರುವ ಬಟಗೇರಾ ಚಿಕ್ಕದಾದರೂ, ಭಕ್ತಿಯಲ್ಲಿ ಮಾತ್ರ ಸಾಕಷ್ಟು ಶ್ರೀಮಂತಿಕೆಯಿAದ ಕೂಡಿದೆ. ಜಗದ್ಗುರುಗಳ ಆಶೀರ್ವಾದದಿಂದ ಎಲ್ಲರಿಗೂ ಸಮೃದ್ಧಿ ಬದುಕು ದೊರೆಯಲಿದೆ. ನಿತ್ಯ ಬದುಕಿನಲ್ಲಿ ಲಿಂಗಪೂಜೆ ಹಾಗೂ ಪಂಚಾಕ್ಷರಿ ಮಂತ್ರ ಪಠಿಸಿದರೆ ದಾರಿದ್ರ್ಯ ದೂರವಾಗುತ್ತದೆ. ಧರ್ಮ ಕಾರ್ಯದ ಮೂಲಕ ನಾವೆಲ್ಲರೂ ಭಗವಂತನ ಕೃಪೆಗೆ ಪಾತ್ರರಾಗಬೇಕು.

| ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯ, ಅಫಜಲಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net