

ಶೃಂಗೇರಿ: ನಾವು ಹೇಗೆ ಯೋಚಿಸುತ್ತೇವೆಯೋ ಹಾಗೆ ಬದುಕುತ್ತಿದ್ದೇವೆ. ಗುರಿ ಇಟ್ಟು ಮುನ್ನಡೆದರೆ ಮಾತ್ರ ಗುರಿ ತಲುಪಬಹುದು. ಪದವಿ ಪಡೆದರೆ ಮನೆಗೆ ಗೌರವ ಎಂಬ ಕಾಲವಿತ್ತು. ಪ್ರಸ್ತುತ ಜಗತ್ತನ್ನು ಜ್ಞಾನ ಆಳುತ್ತಿದ್ದು ಅದರ ಮುಂದೆ ಅಧಿಕಾರ, ಹಣ ಶೂನ್ಯ ಎಂದು ಮೈಸೂರಿನ ಶಿಕ್ಷಣ ತಜ್ಞ ಪ್ರೊ. ಎಂ.ಕೃಷ್ಣೇಗೌಡ ತಿಳಿಸಿದರು.
ಜೆಸಿಬಿಎಂ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘ ಆಯೋಜಿಸಿದ್ದ ಗುರುನಮನ ಮತ್ತು ಡಾ. ಕೆ.ಬಿ.ರಾಮಕೃಷ್ಣರಾವ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಣ ವ್ಯವಸ್ಥೆಯಲ್ಲಿ ಪದವಿ ಎನ್ನುವುದು ಮಾರ್ಗ. ವಿದ್ಯಾವಂತರಾಗುವುದು ಅದರ ಗುರಿ. ಕಾನೂನು ಎಂಬುದು ಮಾರ್ಗ. ನ್ಯಾಯ ಅದರ ಹೆಗ್ಗುರಿ. ಶಿಕ್ಷಕರು ಒಬ್ಬ ವ್ಯಕ್ತಿ. ಅವರಲ್ಲಿ ಎಲ್ಲರೂ ಗುರುವಾಗಲು ಸಾಧ್ಯವಿಲ್ಲ. ಗುರುವಾಗಲು ಶಿಕ್ಷಕರಲ್ಲಿ ಉನ್ನತ ಗುರಿ ಇರಬೇಕು. ಯೋಗ್ಯತೆಯಿಂದ ಶಿಕ್ಷಕರು ಗುರುವಾಗಲು ಸಾಧ್ಯ ಎಂದರು.
ಹೈಕೋರ್ಟ್ ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಮಾತನಾಡಿ, ಮಕ್ಕಳು ಹೆಚ್ಚು ಅಂಕ ಗಳಿಸಿದರೆ ಸಾಕು ಎಂದು ಪಾಲಕರು ಯೋಚಿಸುತ್ತಾರೆ. ಆದರೆ ಶಿಕ್ಷಕರು ವಿದ್ಯಾರ್ಥಿಗಳ ಏಳಿಗೆಯನ್ನು ಮಾತ್ರ ಬಯಸುತ್ತಾರೆ. ವಿದ್ಯಾರ್ಥಿಗಳು ವಕೀಲರಾಗಬೇಕು ಎಂಬ ಆಶಯ ಹೊಂದಿರಬೇಕು. ಸಮಾಜದ ಕೆಟ್ಟ ವ್ಯವಸ್ಥೆ ವಿರುದ್ಧ ನ್ಯಾಯ ದೊರಕಿಸಿಕೊಟ್ಟರೆ ಸಮಾಜದ ಉನ್ನತೀಕರಣ ಸಾಧ್ಯ. ವೈದ್ಯರು ಆರೋಗ್ಯ ಸರಿಪಡಿಸುತ್ತಾರೆ. ನ್ಯಾಯಾಲಯದಲ್ಲಿ ನ್ಯಾಯ ಸಿಗದಿದ್ದರೆ ಅಫೀಲು ಮಾಡಲು ಅವಕಾಶವಿದೆ. ಆದರೆ ಶಿಕ್ಷಕರು ವಿದ್ಯಾರ್ಥಿಗಳ ಕುರಿತು ಕಾಳಜಿ ವಹಿಸದಿದ್ದರೆ ವಿದ್ಯಾರ್ಥಿಗಳ ಭವಿಷ್ಯ ಕುಂಠಿತವಾಗಿ ಅದನ್ನು ಸರಿಪಡಿಸಲು ಸಾಧ್ಯವಿಲ್ಲ. ಹಾಗಾಗಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಸದಾ ಮಾರ್ಗದರ್ಶನ ನೀಡುವ ಗುರುವಾಗಬೇಕು. ಗುರು ಹೇಳಿದ್ದನ್ನು ವಿದ್ಯಾರ್ಥಿಗಳು ನಮ್ರತೆಯಿಂದ ಸ್ವೀಕರಿಸಬೇಕು ಎಂದರು.
ಮಕ್ಕಳನ್ನು ಪ್ರಯೋಗ ಶಾಲೆಯಲ್ಲಿ ಬೆಳೆಸುತ್ತಿದ್ದೇವೆ. ಪಾರಿಜಾತ ಹೂವಿನ ಪರಿಮಳ, ಗುಡುಗು-ಸಿಡಿಲಿನ ಆರ್ಭಟ, ಭೂಮಿಯ ಮಣ್ಣು ಮುಟ್ಟಿ ಸಂತಸ ಪಡುವ ಕ್ಷಣ, ಹಕ್ಕಿಗಳ ಇಂಚರ ಮುಂತಾದ ಪ್ರಾಕೃತಿಕ ಸೊಬಗು ಹಾಗೂ ಸಮಾಜದ ಎಲ್ಲ ವರ್ಗದವರ ಜತೆ ಬೆರೆಯುವ ಗುಣವನ್ನು ಮಕ್ಕಳಿಗೆ ಕಲಿಸುತ್ತಿಲ್ಲ. ಶಿಕ್ಷಣ ಎಂದರೆ ಅಂಕ ಗಳಿಸುವುದಕ್ಕೆ ಸೀಮಿತವಲ್ಲ. ಸಮಾಜದ ಒಂದು ಅಂಶವಾಗಿ ದೇಶದ ಪ್ರಗತಿಗೆ ಉನ್ನತ ಕೊಡುಗೆ ನೀಡಬೇಕಾದರೆ ಮಕ್ಕಳಿಗೆ ಜಗತ್ತಿನ ವಿಸ್ಮಯ, ಜ್ಞಾನದ ಅವಶ್ಯಕತೆ, ಸಮಾಜದ ಆಗುಹೋಗುಗಳ ಪರಿಕಲ್ಪನೆ ಮೂಡಿಸುವಲ್ಲಿ ಪಾಲಕರು ಮತ್ತು ಶಿಕ್ಷಕರ ಪಾಲು ಅತಿ ದೊಡ್ಡದು ಎಂದು ಪ್ರೊ. ಎಂ.ಕೃಷ್ಣೇಗೌಡ ತಿಳಿಸಿದರು.
ಕಾಲೇಜಿನ ಪ್ರಾಧ್ಯಾಪಕರಿಗೆ ಗೌರವ, ಬಡವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸಹಾಯಧನ, ಗಣ್ಯರಿಗೆ ಸನ್ಮಾನ ಮಾಡಲಾಯಿತು. ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿವೇಕ್ ಬೇಗಾನೆ, ಗೌರಾವಾಧ್ಯಕ್ಷ ಗೋಪಾಲ್ ಹೆಗಡೆ, ಕಾರ್ಯದರ್ಶಿ ಎಚ್.ಟಿ.ರಮೇಶ್, ಮಾಜಿ ಅಧ್ಯಕ್ಷ ಟಿ.ಟಿ.ಕಳಸಪ್ಪ, ಪ್ರಾಚಾರ್ಯ ಡಾ. ಎಂ.ಸ್ವಾಮಿ, ಉಪಪ್ರಾಚಾರ್ಯ ಎ.ಜಿ.ಪ್ರಶಾಂತ್, ದಾನಿ ಡಾ. ನಿರ್ಮಲಾ ಇದ್ದರು.