

ಹಾಸನ: ಶೋಷಿತ ಸಮುದಾಯವನ್ನು ಮೇಲೆತ್ತುವ ಸಲುವಾಗಿ ಉಕ್ಕಿನ ಮನುಷ್ಯ ಡಾ.ಬಾಬು ಜಗಜೀವನ ರಾಂ ಅವರ ಶ್ರಮ ಅಪಾರವಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಶುಕ್ರವಾರ ಬಾಬು ಜಗಜೀವನ ರಾಂ ಜಯಂತಿ ಉದ್ಘಾಟಿಸಿ ಮಾತನಾಡಿ ಅವರು, ಹಸಿರು ಕ್ರಾಂತಿ ಹರಿಕಾರರಾಗಿ, ಬಡವರ, ಕೂಲಿ ಕಾರ್ಮಿಕರ ಪರವಾಗಿ ಅನೇಕ ಕಾನೂನು ಜಾರಿಗೆ ತರುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿದ ಕೀರ್ತಿ ಬಾಬೂಜಿ ಅವರಿಗೆ ಸಲ್ಲುತ್ತದೆ ಎಂದರು.
ಬಾಬು ಜಗಜೀವನ ರಾಂರವರ ಹಾದಿಯಲ್ಲಿ ಎಲ್ಲರೂ ನಡೆದು ಸಮ ಸಮಾಜ, ಅರ್ಥಪೂರ್ಣ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡೋಣ ಎಂದು ಕರೆ ನೀಡಿದ ಅವರು, ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಳವಾಗಿ ಜಯಂತಿ ಆಚರಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡಿ ಜಗಜೀವನ್ ರಾಂ ಅವರ ಅವರ ತತ್ವ ಆದರ್ಶದ ಬಗ್ಗೆ ಜನರಿಗೆ ತಿಳಿಸುವ ಕೆಲಸ ಮಾಡೋಣ ಎಂದು ಅವರು ತಿಳಿಸಿದರು.
ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಆರ್ ಪೂರ್ಣಿಮಾ ಅವರು ಮಾತನಾಡಿ, ಬಾಬು ಜಗಜೀವನ್ ರಾಂ ಅವರು 1945 ರಲ್ಲಿ ಕಾರ್ಮಿಕ ಸಚಿವರಾಗಿ ನೇಮಕವಾದಾಗ ಕಾರ್ಮಿಕರ ಪರವಾಗಿ ಅನೇಕ ಕಾಯಿದೆ ಹಾಗೂ ಯೋಜನೆ ಜಾರಿಗೆ ತಂದರು. ಆರ್ಥಿಕವಾಗಿ, ಸಾಮಾಜಿಕವಾಗಿ ಕಾರ್ಮಿಕರೂ ಕೂಡ ಮುನ್ನಲೆಗೆ ಬರಬೇಕು ಎಂಬ ದೃಷ್ಟಿಯಿಂದ ಅನೇಕ ಜನಪರ ಕಾರ್ಯಕ್ರಮ ರೂಪಿಸಿದ್ದಾರೆ ಎಂದರು.
ಬಾಬೂಜಿ ಅವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು. ದೇಶದ ಪ್ರತಿನಿಧಿಯಾಗಿ, ಬಡವರ ಪ್ರತಿನಿಧಿಯಾಗಿ, ಸಂವಿಧಾನದ ಆಶಯದಂತೆ ಕೆಲಸ ಮಾಡಿ ಬಡವರಿಗೆ, ಮಹಿಳೆಯರಿಗೆ, ಸಮಾನ ಹಕ್ಕುಗಳನ್ನು ಕಲ್ಪಿಸಿಕೊಡುವ ಸಲುವಾಗಿ ಕೆಲಸ ಮಾಡಿದ್ದಾರೆ. ಅದರ ಪರಿಣಾಮವಾಗಿಯೇ ಇಂದು ನಾವು ನೀವೆಲ್ಲರೂ ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆಯಲು ಸಾಧ್ಯವಾಗಿದೆ ಎಂದರು.
ಕನಿಷ್ಠ ಕೂಲಿ ಕಾಯ್ದೆ, ರಾಜ್ಯ ಕಾರ್ಮಿಕ ವಿಮಾ ಕಾಯ್ದೆ, ತೋಟಗಾರಿಕಾ ಕಾರ್ಮಿಕರ ವಿಮಾ ಕಾಯ್ದೆ, ಸೇರಿದಂತೆ ಅನೇಕ ಕಾಯ್ದೆಗಳನ್ನು ತಂದು ಬಡವರನ್ನು ಮೇಲೆತ್ತುವ ಕೆಲಸ ಮಾಡಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರು ಪ್ರಮುಖ ಸಮಿತಿಗಳಲ್ಲಿ ಕೆಲಸ ಮಾಡಿರುವ ಜಗಜೀವನ ರಾಂ ದೇಶದಲ್ಲಿ ಬರಗಾಲ ಬಂದು ಆಹಾರಕ್ಕೆ ತೊಂದರೆಯಾದಾಗ ಹಸಿರು ಕ್ರಾಂತಿ ಮೂಲಕ ದೇಶದ ಜನರ ಹಸಿವು ನೀಗಿಸುವ ಕೆಲಸ ಮಾಡಿದ್ದಾರೆಎಂದು ಅವರು ತಿಳಿಸಿದರು.
ನೀರಾವರಿ ಸಚಿವರಾಗಿ ಅಂದಿನ ಕಾಲದಲ್ಲಿ ಉತ್ತಮ ಬಿತ್ತನೆ ಬೀಜ ಪೂರೈಕೆ, ಮಾರುಕಟ್ಟೆ ವ್ಯವಸ್ಥೆ, ರಸಗೊಬ್ಬರಗಳ ಸಮಗ್ರ ಪೂರೈಕೆ ಹೀಗೆ ಎಲ್ಲಾ ಆಯಾಮ ಗಳಲ್ಲಿಯೂ ಯೋಚಿಸಿ ಕೃಷಿ ಕ್ಷೇತ್ರದಲ್ಲಿ ಅನೇಕ ಸುಧಾರಣೆ ತಂದಿದ್ದಾರೆ. ಪ್ರಮುಖವಾಗಿ ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದು ಭೂ ರೈತರಿಗೆ ಭೂಮಿ ಒದಗಿಸುವ ಕೆಲಸ ಮಾಡಿದ್ದಾರೆ. ಆದ್ದರಿಂದ ಜಗಜೀವನ ರಾಂ ಅವರ ಆಶಯ ಹಾಗೂ ದೂರದೃಷ್ಟಿ ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಬಾಬು ಜಗಜೀವನ ರಾಂ ಅವರ ಸಾಧನೆಗಳ ಕಿರು ಹೊತ್ತಿಗೆಯನ್ನು ಜನರಿಗೆ ಹಂಚುವ ಮೂಲಕ ಅವರ ಸಾಧನೆ ಹೆಸರಿಸುವ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಈ.ಕೃಷ್ಣೇಗೌಡ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್, ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸತೀಶ್ ಇತರರು ಇದ್ದರು.