

ವೆಂಕಟರಾಜು ಎಸ್. ದೊಡ್ಡಬಳ್ಳಾಪುರ
ದೊಡ್ಡಬಳ್ಳಾಪುರ ನಗರಕ್ಕೆ ಪ್ರಮುಖ ಕುಡಿಯುವ ನೀರಿನ ಆಸರೆಯಾಗಿರುವ ಜಕ್ಕಲಮಡು ಜಲಾಶಯಕ್ಕೆ ಭರಪೂರ ನೀರು ಹರಿದು ಬಂದಿದ್ದು, ಎರಡು ವರ್ಷಗಳ ಬಳಿಕ ಜಲಾಶಯ ಕೋಡಿ ಹರಿದಿದೆ.
ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚಾಗಿದೆ. ಈಗ ಸಂಗ್ರಹವಾಗಿರುವ ನೀರಿನಮಟ್ಟ ಗಮನಿಸಿದರೆ ದೊಡ್ಡಬಳ್ಳಾಪುರಕ್ಕೆ ಮುಂದಿನ ಒಂದು ವರ್ಷ ನೀರಿನ ಪೂರೈಕೆಗೆ ಯಾವುದೇ ಸಂಕಷ್ಟ ಇಲ್ಲವಾಗಿದೆ.
ಕನಿಷ್ಠ ಒಂದು ವರ್ಷ ನೀರಿಗಿಲ್ಲ ಬವಣೆ: ಜಕ್ಕಲಮಡು ಜಲಾಶಯದ ಒಟ್ಟು ನೀರಿನ ಸಂಗ್ರಹಣ ಸಾಮರ್ಥ್ಯ 819.37 ದಶ ಲಕ್ಷ ಲೀಟರ್ ಆಗಿದ್ದು, ಪ್ರಸ್ತುತ ಜಲಾಶಯ ತುಂಬಿದೆ. ಇಲ್ಲಿಂದಲೇ ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ಎರಡು ನಗರಗಳಿಗೆ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಸಂಗ್ರಹಣಾ ವ್ಯವಸ್ಥೆಯಲ್ಲಿ ದೊಡ್ಡಬಳ್ಳಾಪುರ ನಗರಕ್ಕೆ ಶೇ. 31.66 ಮತ್ತು ಚಿಕ್ಕಬಳ್ಳಾಪುರ ನಗರಕ್ಕೆ ಶೇ.68.34 ಪ್ರಮಾಣದಲ್ಲಿ ನೀರು ಸರಬರಾಜು ಆಗುತ್ತಿದೆ. ನಗರಕ್ಕೆ ಪ್ರತಿದಿನ 9.00 ಲಕ್ಷ ಲೀಟರ್ ನೀರು ಸರಬರಾಜು ಆಗುತ್ತಿದೆ. 13.50 ಎಂಎಲ್‌ಡಿ ನೀರಿನ ಅಗತ್ಯವಿದೆ.
ಪ್ರವಾಸಿಗರ ದೌಡು: ರೈತರ ಜೀವನಾಡಿ, ಜೀವಸೆಲೆಯಾಗಿರುವ ಜಕ್ಕಲಮಡು ಜಲಾಶಯ ಭರ್ತಿಯಾಗಿ ಕೋಡಿಯಲ್ಲಿ ಜಲಧಾರೆ ಸೃಷ್ಟಿಯಾಗಿದೆ. ಧುಮ್ಮಿಕ್ಕುವ ನೀರು ನೋಡಲೆಂದೆ ಜನ ಸಾಗರ ಹರಿದು ಬರುತ್ತಿದೆ. ಒಂದು ರೀತಿಯ ಸಂಭ್ರಮ ಮನೆ ಮಾಡಿದೆ. ಪಟ್ಟಣದ ಗೌಜು ಗದ್ದಲದಲ್ಲಿದ್ದವರು ನಿಸರ್ಗದ ಮಡಿಲಲ್ಲಿ ಕೂತು ಧಾರೆಯಾಗಿ ಹರಿಯುವ ಜಲವನ್ನು ಕಂಡು ಸಂಭ್ರಮಿಸುತ್ತ ಮೈಮನಸ್ಸು ಹಗುರ ಮಾಡಿಕೊಂಡು ಮನೆಯತ್ತ ಹೆಜ್ಜೆ ಹಾಕುತ್ತಿದ್ದಾರೆ.
ಉಭಯ ನಗರಕ್ಕೆ ಸಹಕಾರ: ಕಳೆದ ಹಲವು ವರ್ಷಗಳಿಂದ ಮಳೆ ಕೊರತೆಯಾದ ಪರಿಣಾಮ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ಉಭಯ ನಗರಗಳಿಗೆ ನೀರಿನ ಹಂಚಿಕೆಯಲ್ಲಿ ಸಮಸ್ಯೆ ಉಂಟಾಗಿತ್ತು. ಆದರೆ, ಪ್ರಸ್ತುತ ಸಾಲಿನಲ್ಲಿ ಜಲಾಶಯ ತುಂಬಿರುವ ಪರಿಣಾಮ ಎರಡೂ ನಗರಗಳಿಗೆ ನಿಗದಿಯಂತೆ ನೀರು ಒದಗಿಸಲು ಸಹಕಾರವಾಗಲಿದೆ.
ನೀರಿಲ್ಲದೆ ತಳಕಂಡಿದ್ದ ಸಂಗ್ರಹಾಗಾರ: ಜಕ್ಕಲಮಡು ವರ್ಷವೀಡಿ ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರಕ್ಕೆ ನೀರು ಒದಗಿಸುವ ಪ್ರಮುಖ ಜಲಾಶಯವಾಗಿದೆ. ಕಳೆದ ವರ್ಷದ ಬಿರುಬಿಸಿಲಿಗೆ ಮಳೆ ಇಲ್ಲದೆ ನೀರು ಸಂಪೂರ್ಣ ನೆಲಕಚ್ಚಿತ್ತು. ಹಲವು ದಿನಗಳಿಂದ ಸುರಿಯುತ್ತಿರುವ ವರ್ಷಾಧಾರೆಗೆ ನೀರು ಹರಿಯುತ್ತಿದೆ.
ನಾನು ಶಾಸಕನಾದ ಬಳಿಕ ಮೊದಲ ಬಾರಿಗೆ ಜಕ್ಕಲಮಡು ಜಲಾಶಯ ತುಂಬಿ ಕೋಡಿ ಹರಿದಿದೆ. ನೀರು ವ್ಯರ್ಥವಾಗದಂತೆ ನೋಡಿಕೊಳ್ಳಲು ನಗರಸಭೆ ಅಧಿಕಾರಿಗಳಿಗೆ ಸೂಚಿಸಲಾಗುವುದು. ಜಲಾಶಯ ತುಂಬಿರುವುದರಿಂದ ಕನಿಷ್ಠ ಒಂದು ವರ್ಷ ನಮ್ಮ ನಗರಕ್ಕೆ ನೀರಿನ ಬವಣೆ ನೀಗಲಿದೆ. ಶೀಘ್ರವೇ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಲಾಗುವುದು. ಧೀರಜ್ ಮುನಿರಾಜು, ಶಾಸಕ. ದೊಡ್ಡಬಳ್ಳಾಪುರ ಕಳೆದೊಂದು ವಾರದಿಂದ ಸುರಿದ ಮಳೆಯಿಂದಾಗಿ ಜಲಾಶಯ ಸಂಪೂರ್ಣವಾಗಿ ತುಂಬಿದೆ. ದೊಡ್ಡಬಳ್ಳಾಪುರ ನಗರಕ್ಕೆ ಅಗತ್ಯವಿರುವ 13.50 ಎಂಎಲ್‌ಡಿ ನೀರಿನ ಪೂರೈಕೆಗೆ ಅಡ್ಡಿಯಿಲ್ಲ. ಅಂತರ್ಜಲ ಮತ್ತು ಬೋರ್‌ವೆಲ್‌ಗಳು ರೀಚಾರ್ಜ್ ಆಗುವುದರಿಂದ ಮುಂದಿನ ಒಂದು ವರ್ಷ ನೀರಿನ ಅಭಾವ ದೂರವಾಗಿರುವುದು ಸಂತೋಷದ ವಿಚಾರವಾಗಿದೆ. ರಾಮೇಗೌಡ ಎಇಇ, ನೀರು ಸರಬರಾಜು ವಿಭಾಗ, ನಗರಸಭೆ, ದೊಡ್ಡಬಳ್ಳಾಪುರ