ಜಕ್ಕನಹಳ್ಳಿ ರಸ್ತೆ ಡಾಂಬರೀಕರಣ ಕಳಪೆ ಕಾಮಗಾರಿ: ಗ್ರಾಮಸ್ಥರು ಆರೋಪ

ಜಕ್ಕನಹಳ್ಳಿ ರಸ್ತೆ ಡಾಂಬರೀಕರಣ ಕಳಪೆ ಕಾಮಗಾರಿ: ಗ್ರಾಮಸ್ಥರು ಆರೋಪ
Published on

ಹೊಳೆನರಸೀಪುರ: ತಾಲೂಕಿನ ಜಕ್ಕನಹಳ್ಳಿ ರಸ್ತೆ ಡಾಂಬರೀಕರಣ ಸಂಪೂರ್ಣ ಕಳಪೆ ಕಾಮಗಾರಿ ಮಾಡುವ ಮೂಲಕ ಗುತ್ತಿಗೆದಾರ ಹಾಗೂ ಇಲಾಖೆ ಇಂಜಿನಿಯರ್ ಭಾರಿ ಭ್ರಷ್ಟಾಚಾರ ಮಾಡಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.

      ಹೊಳೆನರಸೀಪುರ ತಾಲೂಕಿನ ಹಳ್ಳಿ ಮೈಸೂರು ಹೋಬಳಿ ವ್ಯಾಪ್ತಿಯಲ್ಲಿ ಬರುವ ಹಾರಗೌಡನಹಳ್ಳಿ ಗ್ರಾಮದಿಂದ ಜಕ್ಕನಹಳ್ಳಿ, ಗುಡ್ಡೇನಹಳ್ಳಿ, ಸೋಮನಹಳ್ಳಿ ವರೆಗಿನ ರಸ್ತೆ ಮಾರ್ಗವನ್ನು ಪ್ರಧಾನಮಂತ್ರಿ ಸಡಕ್ ಯೋಜನೆ ಅಡಿಯಲ್ಲಿ 4 ಕೋಟಿ 80 ಲಕ್ಷ ಅಂದಾಜು ವೆಚ್ಚದಲ್ಲಿ ರಸ್ತೆ ಡಾಂಬರೀಕರಣಕ್ಕೆ ಶಾಸಕ ಎಟಿ ರಾಮಸ್ವಾಮಿ ಚಾಲನೆ ನೀಡಿದ್ದರು.

    ಗುತ್ತಿಗೆದಾರ ಬೆಂಗಳೂರು ಮೂಲದ ನಾರಾಯಣ ರೆಡ್ಡಿ ಕಾಮಗಾರಿಯ ಟೆಂಡರ್ ಪಡೆದು ಕಾಮಗಾರಿಯನ್ನು ಪ್ರಾರಂಭಿಸಿದ್ದು ಗುರುವಾರ ರಾತ್ರೋರಾತ್ರಿ ಕೆಲಸವನ್ನು ಮುಗಿಸಿ ಬೆಳಗಾಗುವಷ್ಟರಲ್ಲಿ ಕಳಪೆ ಕಾಮಗಾರಿ ಮುಗಿಸಿ ಕೈ ತೊಳೆದುಕೊಂಡಿದ್ದಾರೆ. ಗ್ರಾಮಸ್ಥರು ನೋಡುವಷ್ಟರಲ್ಲಿ ಗುತ್ತಿಗೆದಾರ ಸ್ಥಳದಿಂದ ನಿರ್ಗಮಿಸಿದ್ದಾರೆ ಗುಣಮಟ್ಟದ ಕಾಮಗಾರಿಯನ್ನು ನಡೆಸದೆ ಭ್ರಷ್ಟಾಚಾರ ಎಸೆಗಿದ್ದಾರೆ ಡಾಂಬರೀಕರಣ ಮಾಡುವ ಮೊದಲು ರಸ್ತೆಗೆ ಜಲ್ಲಿ ಕಲ್ಲುಗಳನ್ನು ಹಾಕಿರುವುದಿಲ್ಲ ಮಣ್ಣಿನ ಮೇಲೆಯೇ ತೆಳುವಾಗಿ ಡಾಂಬರೀಕರಣ ಹಾಕಿಸಿ ಅನ್ಯಾಯವೆಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರು.

      ಕಮಿಷನ್ ಆಸೆಗಾಗಿ ಇಂಜಿನಿಯರ್ ಹಾಗೂ ಗುತ್ತಿಗೆದಾರ ಇಬ್ಬರು ಕಳಪೆ ಕಾಮಗಾರಿ ಮಾಡಿ ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಿದ್ದಾರೆ. ರಸ್ತೆಗೆ ಅಳವಡಿಸಿದ್ದ ಡಾಂಬರ್ ಹಪ್ಪಳದಂತೆ ಕಿತ್ತು ಬರುತ್ತಿದೆ ಈ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದಕ್ಕಾಗಿರುವ ನಷ್ಟವನ್ನು ಅವರಿಂದಲೇ ಬರಿಸಬೇಕು. ಈಗ ಹಾಕಿರುವ ಕಳಪೆ ಡಾಂಬರೀಕರಣವನ್ನು ತೆರವುಗೊಳಿಸಿ ಗುಣಮಟ್ಟದ ರಸ್ತೆ ಕಾಮಗಾರಿ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರು.

      ರಾತ್ರಿ ಸಮಯದಲ್ಲಿ ಕಾಮಗಾರಿಯನ್ನು ನಡೆಸಬಾರದೆಂದು ಗ್ರಾಮಸ್ಥರು ಗುತ್ತಿಗೆದಾರನಿಗೆ ಮನವಿ ಮಾಡಿದ್ದೆವು, ಆದರೂ ದಬ್ಬಾಳಿಕೆಯಿಂದ ಕಾಮಗಾರಿ ಮುಂದುವರಿಸಿದ್ದರು. ನಿಮ್ಮಿಂದ ಕಾಮಗಾರಿ ನಡೆಸಲು ಪಾಠ ಕಲಿಯಬೇಕಾಗಿಲ್ಲ ಕೆಲಸ ಮಾಡುವುದು ನಮಗೆ ಗೊತ್ತು ಎಂದು ಅಹಂಕಾರ ಪ್ರದರ್ಶಿಸಿದ್ದರು. ಕಳಪೆ ಡಾಂಬರಿಕರಣ ರಸ್ತೆಗೆ ಹಾಕುವ ಮೂಲಕ ಸಾರ್ವಜನಿಕರಿಗೆ ಮೋಸ ಮಾಡಿದ್ದಾರೆ. ಸ್ಥಳದಲ್ಲಿ ನಿಂತು ಕಾಮಗಾರಿ ನಡೆಸಿದ ಇಲಾಖೆಯ ಅಭಿಯಂತರ ಮೇಲೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಗುತ್ತಿಗೆದಾರನಿಂದ ಕಾಮಗಾರಿಯ ಸಂಪೂರ್ಣ ವೆಚ್ಚವನ್ನು ದಂಡದ ರೂಪದಲ್ಲಿ ವಸೂಲಿ ಮಾಡಬೇಕು ಎಂದು ಗ್ರಾಮಸ್ಥರು ತಿಳಿಸಿದ್ದಾರು.

ಇಲಾಖೆಯ ಇಂಜಿನಿಯರ್ ಶಂಕರ್ ಹಾಗೂ ಗುತ್ತಿಗೆದಾರರು ಯಾವುದೇ ದೂರವಾಣಿ ಕರೆಗಳನ್ನು ಸ್ವೀಕರಿಸುತ್ತಿಲ್ಲ. ಸಂಬಂಧಪಟ್ಟ ಗುತ್ತಿಗೆದಾರ ಹಾಗೂ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.

ಇದೇ ಸಂದರ್ಭದಲ್ಲಿ ಹರೀಶ್ ರಂಗೆಗೌಡ ಭೀಮೇಶ್ ರಾಜಶೇಖರ ಮೋಹನ್ ಮತ್ತು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net