

ವಸಂತ ನೀಚಡಿ ತ್ಯಾಗರ್ತಿ
ಹಳ್ಳಿಗಳ ಅಭಿವೃದ್ಧಿಗಾಗಿ ಕಾಲಕಾಲಕ್ಕೆ ಸರ್ಕಾರ ಅನೇಕ ಯೋಜನೆಗಳನ್ನು ನೀಡುತ್ತ ಬಂದಿದೆ. ಆದರೂ ಆಧುನಿಕ ಯುಗದಲ್ಲೂ ಜನರು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ ಎಂದರೆ ಆಶ್ಚರ್ಯದ ಸಂಗತಿ.
ಸ್ಥಳೀಯ ಟಿಂಬರ್ ಗುತ್ತಿಗೆದಾರರು ಕೂಲಿ ಕೆಲಸಕ್ಕಾಗಿ ಕಳೆದ ಐವತ್ತು ವರ್ಷಗಳ ಹಿಂದೆ ತಮಿಳುನಾಡು ಮತ್ತು ಆಂಧ್ರ ಪ್ರದೇಶಗಳಿಂದ ಜನರನ್ನು ಕರೆಸಿಕೊಂಡು ಕೆಲಸ ನೀಡಿದ್ದರು. ಇಲ್ಲಿಯೇ ನೆಲೆಸಿದ ಕೂಲಿಕಾರ್ಮಿಕರು ಜಂಬಾನಿ ಗ್ರಾಮದಲ್ಲಿ ಕ್ಯಾಂಪ್ ಹಾಕಿ ಮರ ಕಡಿಯುವ ಉದ್ಯೋಗದಲ್ಲಿ ಮುಂದುವರಿದಿದ್ದಾರೆ. ಇವರು ಇಂದಿಗೂ ಸ್ಥಳೀಯರೊಂದಿಗೆ ಬೆರೆಯದೆ ಊರಿನಿಂದ ಹೊರಗೆ ವಾಸಮಾಡುತ್ತ ತಮ್ಮದೇ ಕ್ಯಾಂಪ್‌ನಲ್ಲಿ ಸಣ್ಣ ಮನೆ ನಿರ್ಮಿಸಿಕೊಂಡು ಕೂಲಿ ಮಾಡಿ ಬದುಕುತ್ತಿದ್ದಾರೆ. ಆದರೆ ಬಹಳಷ್ಟು ವರ್ಷಗಳಿಂದ ನೆಲೆಸಿರುವ ಇವರಿಗೆ ಕನಿಷ್ಠ ಮೂಲ ಸೌಕರ್ಯಗಳೂ ದೊರೆಯುತ್ತಿಲ್ಲ.
ರಸ್ತೆ ಸಂಪರ್ಕ ಇಲ್ಲ. ಕೆಲವು ಮನೆಗಳಿಗೆ ವಿದ್ಯುತ್ ಸಂಪರ್ಕ ಕುಡಿಯುವ ನೀರಿನ ಸೌಲಭ್ಯ ಕೂಡ ಸರಿಯಾಗಿ ಸಿಗುತ್ತಿಲ್ಲ. ಇವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ.
32 ಮಕ್ಕಳು ಶಾಲೆಗೆ ದಾಖಲಾಗಿದ್ದರೂ ನಿರಂತರವಾಗಿ ಶಾಲೆಗೆ ಗೈರಾಗುತ್ತಾರೆ. ಮಕ್ಕಳು ಬೆಳೆದಂತೆ ಶಾಲೆಬಿಟ್ಟು ಮರಕಡಿಯುವ ಕೆಲಸಕ್ಕೆ ಸೇರುತ್ತಾರೆ. ಇದರಿಂದ ಇವರಿಗೆ ಶಿಕ್ಷಣವೂ ಮರೀಚಿಕೆಯಾಗಿದೆ. ಜತೆಗೆ ಬಾಲ್ಯವಿವಾಹ ಘಟನೆಗಳು ನಡೆದಿವೆ. ಹೀಗೆ ಬದುಕುತ್ತಿರುವ ಕ್ಯಾಂಪ್‌ನ ಜನರಿಗೆ ಮೂಲ ಸೌಕರ್ಯ ಒದಗಿಸಬೇಕಿರುವುದು ಸರ್ಕಾರಿ ಅಕಾರಿಗಳು ಹಾಗೂ ಜನಪ್ರತಿನಿಗಳ ಜವಾಬ್ದಾರಿ.
ಕ್ಯಾಂಪ್‌ನಲ್ಲಿ ಸುಮಾರು 90 ಜನರು ವಾಸಮಾಡುತ್ತಿದ್ದಾರೆ. ಹದಿನೆಂಟು ಮನೆಗಳಿವೆ. ಆದರೆ ಯಾವ ಮನೆಗೂ ಶೌಚಗೃಹ ಸೌಲಭ್ಯ ಇಲ್ಲ. 40 ಜನರಿಗೆ ಮಾತ್ರವೇ ವೋಟರ್ ಐಡಿ, ಆಧಾರ್ ಕಾರ್ಡ್ ಇದೆ. ಕೆಲವರಿಗೆ ರೇಷನ್ ಕಾರ್ಡ್ ಕೂಡ ಇಲ್ಲ. ಒಂದು ಕುಟುಂಬದಲ್ಲಿ 45 ಜನರಿದ್ದಾರೆ. ಎಲ್ಲರೂ ಕೂಲಿಮಾಡಿ ಬದುಕುತ್ತಿದ್ದಾರೆ. ಅವರ ಮಕ್ಕಳು ಮುಖ್ಯವಾಹಿನಿಗೆ ಬರಲೇ ಇಲ್ಲ.
ಮಕ್ಕಳ ಮನವೊಲಿಕೆ
ಕಾಗೋಡು ತಿಮ್ಮಪ್ಪ ಅವರು ಕಂದಾಯ ಸಚಿವರಾಗಿದ್ದ ಅವಯಲ್ಲಿ ಎಲ್ಲ ಕುಟುಂಬಗಳಿಗೂ ಜಮೀನು ಮಂಜೂರು ಮಾಡಲಾಗಿದೆ. ಆದರೆ ಆ ಜಮೀನುಗಳು ಜಂಬಿಟ್ಟಿಗೆಯ ಕಲ್ಲುಕ್ವಾರಿಗಳಾದ್ದರಿಂದ ಕೂಲಿ ಕೆಲಸವನ್ನೇ ಅವಲಂಬಿಸಿದ್ದಾರೆ. ಈ ಕುಟುಂಬಗಳ ಮಕ್ಕಳಿಗೆ ಶಿಕ್ಷಣ ನೀಡಿ ಮುಖ್ಯವಾಹಿನಿಗೆ ತರಲು ಬರೂರು ಸಿಆರ್‌ಪಿ ಸತೀಶ್ ಶಿಕ್ಷಣ ಇಲಾಖೆಯ ಗಮನಕ್ಕೆ ತಂದು ಮಕ್ಕಳ ಮನವೊಲಿಸಿ ಶಾಲೆಗೆ ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ.
ಸದ್ಯಕ್ಕೆ ದೊರೆತಿದೆ ಭರವಸೆ ತಾಪಂ ಇಒ ಗುರುಕೃಷ್ಣ ಶೆಣೈ ಹಾಗೂ ಸಿಇಒ ಪರಶುರಾಮಪ್ಪ ಅವರು ಜಂಬಾನಿ ಕ್ಯಾಂಪ್‌ಗೆ ಭೇಟಿ ನೀಡಿ ಗ್ರಾಮದ ಜನರನ್ನು ಒಂದೆಡೆ ಸೇರಿಸಿ ಬಾಲ್ಯವಿವಾಹ ತಡೆ, ಪೋಕ್ಸೋ ಕಾಯ್ದೆ ಬಗ್ಗೆ ಮಾಹಿತಿ ನೀಡಿದ್ದಾರೆ. ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯಲು ಪ್ರತಿಜ್ಞಾವಿ ಬೋಸಿದ್ದಾರೆ. ಗ್ರಾಮಸ್ಥರ ಸಮಸ್ಯೆ ಆಲಿಸಿ ಶೌಚಗೃಹ ಕಟ್ಟಿಸಲು ಸಹಕಾರ ನೀಡಲಾಗುತ್ತದೆ. ನಂತರ ಶಾಲಾ ಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ. ಶಾಲೆ ಬಿಟ್ಟು ಮನೆಯಲ್ಲಿದ್ದ 9ನೇ ತರಗತಿ ವಿದ್ಯಾರ್ಥಿನಿ ರೋಜಾ ಎಂಬ ವಿದ್ಯಾರ್ಥಿನಿಯನ್ನು ಅಕಾರಿಗಳು ಮನವೊಲಿಸಿ ಇಂಡುವಳ್ಳಿ ಸೇಂಟ್ ಜೋಸೆಫ್ ವಸತಿ ಶಾಲೆಗೆ ಕರೆದುಕೊಂಡು ಹೋಗಿ ಅಲ್ಲಿನ ಶಿಕ್ಷಣ ಸಂಸ್ಥೆ ಮುಖ್ಯಸ್ಥರ ಜತೆ ಮಾತನಾಡಿ ಮಗುವಿನ ಶಿಕ್ಷಣದ ಜವಾಬ್ದಾರಿ ತೆಗೆದುಕೊಂಡಿದ್ದಾರೆ.
ಜಂಬಾನಿ ಕ್ಯಾಂಪ್‌ನ ಜನರಿಗೆ ಮೂಲ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಶೌಚಗೃಹ, ವಿದ್ಯುತ್ ಎಲ್ಲರಿಗೂ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಸೇರಿ ಸರ್ಕಾರದ ಸೌಲಭ್ಯಗಳನ್ನು ಒದಗಿಸಲಾಗುವುದು. ಬಾಲ್ಯವಿವಾಹ, ಪೋಕ್ಸೋ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗಿದೆ. ಗುರುಕೃಷ್ಣ ಶೆಣೈ, ತಾಪಂ ಇಒ ಜಂಬಾನಿ ಕ್ಯಾಂಪ್‌ನಲ್ಲಿ ನಾಲ್ಕು ಮಕ್ಕಳು ಶಾಲೆ ಬಿಟ್ಟು ಕೂಲಿ ಕೆಲಸಕ್ಕೆ ಹೋಗುತ್ತಿರುವ ವಿಷಯ ಗಮನಕ್ಕೆ ಬಂದಿದೆ. ಅವರನ್ನು ಮತ್ತೆ ಶಾಲೆಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು. ಗ್ರಾಮದಲ್ಲಿ ಸಮಸ್ಯೆ ಇರುವುದು ಕಂಡುಬಂದಿದೆ. ಸಮಸ್ಯೆ ಬಗೆಹರಿಸಲು ನಮ್ಮ ಜವಾಬ್ದಾರಿಗಳನ್ನು ನಾವು ಸರಿಯಾಗಿ ಮಾಡಬೇಕು. ಮುಂದಿನ ದಿನಗಳಲ್ಲಿ ಯಾವುದೇ ವಿದ್ಯಾರ್ಥಿಗಳು ಶಾಲೆ ತೊರೆಯದಂತೆ ಮನವೊಲಿಸಲಾಗುವುದು. ಪರಶುರಾಮಪ್ಪ, ಬಿಇಒ, ಸಾಗರ ಟಿಂಬರ್ ಗುತ್ತಿಗೆದಾರರು ಹೊರ ರಾಜ್ಯಗಳಿಂದ ಕೂಲಿ ಕಾರ್ಮಿಕರನ್ನು ಇಲ್ಲಿಗೆ ಕರೆತಂದಿದ್ದಾರೆ. ಅವರಿಗೆ ಮೂಲ ಸೌಕರ್ಯ ಒದಗಿಸಲು ಯಾವುದೇ ತೊಂದರೆ ಆಗುವುದಿಲ್ಲ. ಮಕ್ಕಳನ್ನು ಕೂಲಿ ಕೆಲಸಕ್ಕೆ ಕರೆದುಕೊಂಡು ಹೋದರೆ ಗುತ್ತಿಗೆದಾರರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಖಂಡೋಜಪ್ಪ, ಬರೂರು ಗ್ರಾಪಂ ಅಧ್ಯಕ್ಷ ನಾವು ಇಲ್ಲಿಗೆ ಬಂದು ಐವತ್ತು ವರ್ಷಗಳಾಗಿವೆ. ರಸ್ತೆ, ನೀರು, ಕರೆಂಟು ಸರಿಯಾಗಿಲ್ಲ. ನಮಗೆ ಆಧಾರ್ ಕಾರ್ಡ್ ಇಲ್ಲ. ಮತದಾರರ ಗುರುತಿನ ಚೀಟಿ ಇಲ್ಲ. ಸರ್ಕಾರದಿಂದ ವೃದ್ಧಾಪ್ಯ ವೇತನ, ಗ್ಯಾರಂಟಿ ಹಣ ಸಹ ಬರುತ್ತಿಲ್ಲ. ಮಕ್ಕಳಿಗೆ ಶಾಲೆಗೆ ಹೋಗಲು ಯಾವುದೇ ಸೌಕರ್ಯ ಇಲ್ಲ. ಶಂಕ್ರಪ್ಪ, ಕೂಲಿ ಕಾರ್ಮಿಕ, ಜಂಬಾನಿ ಕ್ಯಾಂಪ್ ಸಮಸ್ಯೆ, ಕುಂದು ಕೊರತೆಗಳು * ಶಾಲೆಗೆ ದಾಖಲಾದ ಮಕ್ಕಳಿಗೆ ಆಧಾರ್ ಕಾರ್ಡ್, ಜಾತಿ, ಜನನ ಪ್ರಮಾಣ ಪತ್ರ, ವೋಟರ್ ಐಡಿ ಇಲ್ಲ * ಯಾವ ಕುಟುಂಬಕ್ಕೂ ಶೌಚಗೃಹ ವ್ಯವಸ್ಥೆಯಿಲ್ಲ * ಕ್ಯಾಂಪ್‌ಗೆ ರಸ್ತೆ ಸೌಲಭ್ಯವಿಲ್ಲ * ಅಂಗನವಾಡಿಗೆ ಮಕ್ಕಳನ್ನು ಕಳುಹಿಸುತ್ತಿಲ್ಲ *ಮಕ್ಕಳಿಗೆ ಚುಚ್ಚುಮದ್ದು ಹಾಕಿಸಲು ಪಾಲಕರ ಹಿಂದೇಟು