

ಮೈಸೂರು: 2022-23ನೇ ಸಾಲಿನ 2ನೇ ಸುತ್ತಿನ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆಗೆ ಸೋಮವಾರ ಚಾಲನೆ ನೀಡಲಾಯಿತು.
ಕುವೆಂಪುನಗರದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಚ್.ಪ್ರಸಾದ್ ಅವರು ಮಕ್ಕಳಿಗೆ ಅಲ್ಬೆಂಡಜೋಲ್ ಮಾತ್ರೆಯನ್ನು ನೀಡುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ಮಕ್ಕಳನ್ನು ಜಂತುಹುಳು ಸಮಸ್ಯೆಯಿಂದ ಮುಕ್ತರನ್ನಾಗಿ ಮಾಡಲು ಸಾರ್ವಜನಿಕರು ಸಹಕರಿಸಬೇಕು. ಜಿಲ್ಲಾ ವ್ಯಾಪ್ತಿಯಲ್ಲಿ ಜಂತುಹುಳು ನಿವಾರಣಾ ದಿನದ ಅಂಗವಾಗಿ 1 ರಿಂದ 19 ವರ್ಷದ ಮಕ್ಕಳಿಗೆ ಆಲ್ಬೆಂಡಜೋಲ್ ಮಾತ್ರೆಯನ್ನು ನೀಡುತ್ತಿದ್ದು, ಜಿಲ್ಲೆಯ ಎಲ್ಲ ಅಂಗನವಾಡಿಗಳು, ಸರ್ಕಾರಿ, ಖಾಸಗಿ ಶಾಲಾ-ಕಾಲೇಜುಗಳಲ್ಲಿ ಉಚಿತವಾಗಿ ಮಕ್ಕಳಿಗೆ ವಿತರಿಸಲಾಗುತ್ತಿದೆ ಎಂದರು.
ಆರೋಗ್ಯ ಅಧಿಕಾರಿ ಡಾ.ಎಂ.ಎಸ್.ಜಯಂತ್ ಮಾತನಾಡಿ, 1ರಿಂದ 19 ವರ್ಷದ ಎಲ್ಲ ಮಕ್ಕಳು ಈ ಕಾರ್ಯಕ್ರಮದ ಫಲಾನುಭವಿಗಳಾಗಿದ್ದಾರೆ ಎಂದರು. ಶಾಲೆಯಿಂದ ಹೊರಗಿರುವ ಹಾಗೂ ಶಾಲೆಯಲ್ಲಿ ಗೈರುಹಾಜರಾದ ಮಕ್ಕಳಿಗೆ ಮಾ.14ರಿಂದ 25ರ ವರೆಗೆ ಮಾತ್ರೆ ನೀಡಲಾಗುವುದು ಎಂದು ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಕಮಲಮ್ಮ, ಪ್ರಾಂಶುಪಾಲರಾದ ಭಾಗ್ಯಾ, ಹೇಮಾವತಿ ಇತರರು ಇದ್ದರು.