

ಚಿತ್ರದುರ್ಗ: ಜಂತುಹುಳು ರೋಗ ಬಾಧೆಗೆ ಕಾರಣವಾಗುವ ಬಯಲು ಮಲವಿಸರ್ಜನೆಗೆ ಸಂಪೂರ್ಣ ಕಡಿವಾಣ ಹಾಕಬೇಕಿದೆ ಎಂದು ಚಿತ್ರದುರ್ಗ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ. ಗಿರೀಶ್ ಹೇಳಿದರು.
ನಗರದ ಐಯುಡಿಪಿ ಬಡಾವಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಮದಕರಿಪುರ ಭಾರತಿ ಪ್ರೌಢಶಾಲೆಯಲ್ಲಿ ಸೋಮವಾರ ರಾಷ್ಟ್ರೀಯ ಜಂತುಹುಳು ದಿನದ ಅಂಗವಾಗಿ ಮಕ್ಕಳಿಗೆ ಜಂತು ನಿವಾರಕ ಮಾತ್ರೆ ನುಂಗಿಸುವ ಕಾರ‌್ಯಕ್ರಮದಲ್ಲಿ ಮಾತನಾಡಿದರು.
ಜಂತುಹುಳುಗಳಿಂದ ಅನಾರೋಗ್ಯ ಕಾಡುತ್ತದೆ. ಇದರ ನಿವಾರಣೆಗೆ ಕೋಟ್ಯಂತರ ಮಕ್ಕಳು, ಹದಿಹರೆಯದವರಿಗೆ ಜಂತು ಹುಳು ನಿವಾರಣೆ ಮಾತ್ರೆಯನ್ನು ಉಚಿತವಾಗಿ ನುಂಗಿಸುವಂಥ ಈ ಕಾರ್ಯಕ್ರಮ ಅತಿದೊಡ್ಡ ಸಾರ್ವಜನಿಕ ಕಾರ‌್ಯಕ್ರಮಗಳಲ್ಲಿ ಒಂದಾಗಿದೆ ಎಂದರು.
ಕಾಸವರಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕಾವ್ಯಾ ಮಾತನಾಡಿ, ವೈಯಕ್ತಿಕ ನೈರ್ಮಲ್ಯದ ಕೊರತೆ, ಬೇಯಿಸದ ಮತ್ತು ಕಲುಷಿತ ಆಹಾರ ಮತ್ತು ಅತಿಯಾದ ಸಿಹಿ ತಿಂಡಿಗಳು ಮತ್ತು ಜಂಕ್‌ಫುಡ್ ಸೇವನೆ ಸೇರಿ ನಾನಾ ಕಾರಣಗಳಿಂದ ಮಕ್ಕಳಲ್ಲಿ ಜಂತುಹುಳು ಬಾಧೆ ಉಂಟಾಗಬಹುದು ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜನಾಥ ಮಾತನಾಡಿದರು.
ಈ ವೇಳೆ 19 ವರ್ಷದೊಳಗಿನ 325 ಮಕ್ಕಳಿಗೆ ಸಾಂಕೇತಿಕವಾಗಿ ಜಂತು ಹುಳು ನಿವಾರಕ ಮಾತ್ರೆ ನುಂಗಿಸಲಾಯಿತು.
ವೈದ್ಯಾಧಿಕಾರಿಗಳಾದ ಡಾ. ಸುರೇಂದ್ರ, ಆರೋಗ್ಯ ಶಿಕ್ಷಣಾಧಿಕಾರಿ ಬಿ. ಜಾನಕಿ, ಆರೋಗ್ಯ ಸುರಕ್ಷತಾ ಅಧಿಕಾರಿಗಳಾದ ಕಾತ್ಯಾಯನಮ್ಮ, ಉಷಾ, ಪವಿತ್ರಾ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶ್ರೀನಿವಾಸ್,ಪ್ರವೀಣ್‌ಕುಮಾರ್, ಶಿಕ್ಷಕರಾದ ಉಮೇಶ್, ದ್ಯಾಮಣ್ಣ ಮತ್ತಿತರರು ಇದ್ದರು.