ಜಂಟಿ ಸರ್ವೇಯಿಂದಷ್ಟೇ ಪ್ರಯೋಜನ

ಚಿತ್ರ30ಎಸ್‌ಪಿಟಿ04- ಸೋಮವಾರಪೇಟೆ ವಲಯಾ ಅರಣ್ಯಾಧಿಕಾರಿ ಕಚೇರಿಯಲ್ಲಿ ನಡೆದ ರೈತರು ಮತ್ತು ಅರಣ್ಯಾಧಿಕಾರಿಗಳ ಸಭೆಯಲ್ಲಿ ರೈತ ಹೋರಾಟ ಸಮಿತಿ ಅಧ್ಯಕ್ಷ ಕೆ.ಬಿ.ಸುರೇಶ್ ಮಾತನಾಡಿದರು.
ಚಿತ್ರ30ಎಸ್‌ಪಿಟಿ04- ಸೋಮವಾರಪೇಟೆ ವಲಯಾ ಅರಣ್ಯಾಧಿಕಾರಿ ಕಚೇರಿಯಲ್ಲಿ ನಡೆದ ರೈತರು ಮತ್ತು ಅರಣ್ಯಾಧಿಕಾರಿಗಳ ಸಭೆಯಲ್ಲಿ ರೈತ ಹೋರಾಟ ಸಮಿತಿ ಅಧ್ಯಕ್ಷ ಕೆ.ಬಿ.ಸುರೇಶ್ ಮಾತನಾಡಿದರು.
Published on

ಸೋಮವಾರಪೇಟೆ: ರೈತರ ಕೃಷಿ ಭೂಮಿ ಸಿ ಆ್ಯಂಡ್ ಡಿ ಜಾಗ ಸಮಸ್ಯೆ ಬಗೆಹರಿಯಲು ಕೇವಲ ಅರಣ್ಯ ಇಲಾಖೆಯವರು ಸರ್ವೆ ಮಾಡಿದರೆ ಯಾವುದೇ ಪ್ರಯೋಜನವಿಲ್ಲ. ಜಂಟಿ ಸರ್ವೇಯೇ ನಡೆಯಬೇಕು ಎಂದು ರೈತ ಹೋರಾಟ ಸಮಿತಿ ಅಧ್ಯಕ್ಷ ಕೆ.ಬಿ.ಸುರೇಶ್ ಒತ್ತಾಯಿಸಿದರು.

ರೈತರು ಹಾಗು ಅರಣ್ಯ ಇಲಾಖೆಯ ನಡುವೆ ಉಂಟಾಗಿರುವ ಗೊಂದಲವನ್ನು ಸರಿಪಡಿಸಲು ಇಲ್ಲಿನ ವಲಯ ಅರಣ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ಗುರುವಾರ ನಡೆದ ಅರಣ್ಯಾಧಿಕಾರಿಗಳು ಹಾಗೂ ರೈತ ಸಂಘಟನೆಗಳ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ಈ ಹಿಂದಿನಿಂದಲೂ ಜಂಟಿ ಸರ್ವೇಗೆ ಆಗ್ರಹಿಸುತ್ತಲೇ ಬಂದಿದ್ದೇವೆ. ಈಗಾಗಲೇ ಸಮಿತಿಯ ವತಿಯಿಂದ 4-5 ಬಾರಿ ಪ್ರತಿಭಟನೆ ನಡೆಸಲಾಗಿದೆ. ಸೋಮವಾರಪೇಟೆ ತಾಲೂಕು ಬಂದ್ ಮಾಡಿದ ಸಂದರ್ಭ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿಗಳು, ಮುಂದಿನ ದಿನಗಳಲ್ಲಿ ರೈತರಿಗೆ ತಿಳಿಸಿಯೇ ಜಂಟಿ ಸರ್ವೇ ಮಾಡುವುದಾಗಿ ಭರವಸೆ ನೀಡಿದ್ದರು. ಈವರೆಗೆ ಜಂಟಿ ಸರ್ವೇ ಮಾಡಿಲ್ಲ. ಈಗಲೂ ಅರಣ್ಯ ಇಲಾಖೆಯ ಸಿಬ್ಬಂದಿ ಮಾತ್ರ ಸರ್ವೇ ಮಾಡಲು ಬರುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಸರ್ಕಾರದ ಅಧಿಕೃತ ಆದೇಶದೊಂದಿಗೆ ಜಂಟಿ ಸರ್ವೆಗೆ ಬಂದರೆ ನಾವುಗಳೂ ಸ್ಪಂದಿಸುತ್ತೇವೆ. ಆದರೆ ವಾಸ್ತವ ವರದಿಯನ್ನೇ ನೀಡಬೇಕು. ಸ್ಥಳದಲ್ಲಿಯೇ ರೈತರಿಗೆ ಸರ್ವೇ ವರದಿಯನ್ನು ಒದಗಿಸಬೇಕೆಂದು ಒತ್ತಾಯಿಸಿದರು.

ಸಿ ಮತ್ತು ಡಿ ಜಾಗದ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಹಲವು ಬಾರಿ ಮನವಿ ಸಲ್ಲಿಸಿ, ಪ್ರತಿಭಟನೆ, ಬಂದ್ ಮಾಡಿದ್ದರೂ ಸರ್ಕಾರದಿಂದ ಸ್ಪಂದನೆಯಿಲ್ಲ ಎಂದ ಅವರು ನ. 3ರಂದು ಪಟ್ಟಣದಲ್ಲಿ ರೈತ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಅವರು, ಅರಣ್ಯ ಇಲಾಖೆ ನಡೆಸುತ್ತಿರುವ ಸರ್ವೇ ಕಾರ್ಯದ ಮೂಲ ಉದ್ದೇಶದ ಬಗ್ಗೆ ರೈತರಿಗೆ ಮಾಹಿತಿ ನೀಡಲು ಸಭೆ ಕರೆಯಲಾಗಿದೆ ಎಂದರು.

ಈಗಾಗಲೇ ಪ್ರತಿಭಟನೆ, ಹೋರಾಟ, ರೈತರ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ವಾಸ್ತವಾಂಶ ತಿಳಿದುಕೊಳ್ಳಲು ಸರ್ಕಾರದ ಆದೇಶದ ಅನುಸಾರ ಸರ್ವೇ ಕಾರ್ಯ ಮಾಡಲಾಗುತ್ತಿದೆ. ವಾಸ್ತವ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದರೆ ಸಮಸ್ಯೆ ಬಗೆಹರಿಯಲಿದೆ. ಈ ಹಿನ್ನೆಲೆ ಸರ್ವೇ ಕಾರ್ಯಕ್ಕೆ ಅವಕಾಶ ನೀಡಬೇಕೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಹೇಳಿದರು.

ವರದಿಯನ್ನು ಮೊದಲು ಜಿಲ್ಲಾ ಮಟ್ಟದ ಕೆಡಿಪಿ ಸಭೆಯಲ್ಲಿ ಜನಪ್ರತಿನಿಧಿಗಳ ಮುಂದೆ ಸಲ್ಲಿಸಿ, ನಂತರ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ಅಧಿಕಾರಿ ಅಭಿಷೇಕ್ ಮನವರಿಕೆ ಮಾಡಲು ಯತ್ನಿಸಿದರು. ಅಲ್ಲದೆ ಸೆಕ್ಷನ್4, ಸಿ ಮತ್ತು ಡಿ, ಡೀಮ್ಡ್ ಫಾರೆಸ್ಟ್ ಸಂಬಂಧಿತ ಸಮಸ್ಯೆಗಳನ್ನು ಉಭಯ ಕಡೆಯಿಂದಲೂ ಚರ್ಚಿಸಿ ಬಗೆಹರಿಸಬೇಕಿದೆ. ಊರುಡುವೆ, ದೇವರಕಾಡು, ಮೀಸಲು ಅರಣ್ಯದ ಒತ್ತುವರಿ ತೆರವು ಮಾಡಲಾಗುತ್ತದೆ. ಹೊಸ ಒತ್ತುವರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಹೇಳಿದರು.

ವೇದಿಕೆಯಲ್ಲಿ ತಹಸೀಲ್ದಾರ್ ಕೃಷ್ಣಮೂರ್ತಿ, ಎಸಿಎಫ್ ಗೋಪಾಲ್, ಆರ್‌ಎಫ್‌ಒ ಶೈಲೇಂದ್ರ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಜಿ.ಎಂ.ಹೂವಯ್ಯ, ರೈತ ಸಂಘದ ಅಧ್ಯಕ್ಷ ಕೆ.ಎಂ.ದಿನೇಶ್ ಮತ್ತಿತರ ರೈತ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net