

ಮೈಸೂರು: ಪೌಷ್ಟಿಕಯುಕ್ತ ಆಹಾರ ಸೇವನೆ ಮಾಡದೆ, ಜಂಕ್‌ಫುಡ್‌ಗೆ ಹೆಚ್ಚು ಮಾರು ಹೋಗುತ್ತಿರುವುದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಿ ಅನೇಕ ಕಾಯಿಲೆಗಳು ಬರುತ್ತಿವೆ ಎಂದು ಸಿಎಸ್‌ಐಆರ್-ಸಿಎಫ್‌ಟಿಆರ್‌ಐ ನಿರ್ದೇಶಕಿ ಡಾ.ಶ್ರೀದೇವಿ ಅನ್ನಪೂರ್ಣ ಸಿಂಗ್ ಕಳವಳ ವ್ಯಕ್ತಪಡಿಸಿದರು.
ಸುತ್ತೂರಿನ ಜೆಎಸ್‌ಎಸ್ ವಸತಿ ನಿಲಯದಲ್ಲಿ ಗುರುವಾರ ವಿದ್ಯಾರ್ಥಿಗಳೊಂದಿಗೆ ಆಯೋಜಿಸಿದ್ದ ಪೌಷ್ಟಿಕ ಆಹಾರ ಕುರಿತ ಸಂವಾದಲ್ಲಿ ಮಾತನಾಡಿ, ಮನುಷ್ಯನ ದೇಹ ಸ್ವಯಂ ಚಾಲಿತ ಯಂತ್ರವಿದ್ದಂತೆ. ಪ್ರಸ್ತುತ ದಿನಗಳಲ್ಲಿ ಮಕ್ಕಳಿಗೆ ಜಂಕ್‌ಫುಡ್‌ಗಳ ವ್ಯಾಮೋಹ ಹೆಚ್ಚಾಗಿದೆ. ದೇಹಕ್ಕೆ ಅತ್ಯವಶ್ಯಕವಾಗಿ ಬೇಕಾದ ಪೋಷಕಾಂಶಯುಕ್ತ ಆಹಾರಗಳಾದ ಸೊಪ್ಪು, ತರಕಾರಿ, ಮೊಳಕೆ ಕಟ್ಟಿದ ಕಾಳುಗಳು, ಹಣ್ಣು, ಹಂಪಲುಗಳನ್ನು ಮಕ್ಕಳು ಸೇವಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಆಹಾರದಲ್ಲಿ ಯಥೇಚ್ಚವಾಗಿ ರಾಸಾಯನಿಕ ವಸ್ತುಗಳನ್ನು ಬಳಸುತ್ತಿದ್ದು, ಲಿವರ್, ಕಿಡ್ನಿ, ಚರ್ಮ, ಶ್ವಾಸಕೋಶ, ಮಿದುಳು, ಹೃದಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇದರಿಂದ ಮನುಷ್ಯ ದುಡಿದ ದುಡ್ಡನ್ನು ಆಸ್ಪತ್ರೆಗಳಿಗೆ ಖರ್ಚು ಮಾಡಬೇಕಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮನುಷ್ಯನಿಗೆ ಎಷ್ಟೇ ಹಣ, ಐಶ್ವರ್ಯ, ಅಂತಸ್ತುಗಳಿದ್ದರೂ ಆರೋಗ್ಯವಿಲ್ಲದಿದ್ದರೆ ಅವೆಲ್ಲವೂ ಶೂನ್ಯವಾಗಿರುತ್ತವೆ. ಆದ್ದರಿಂದ ಮಕ್ಕಳು ದಿನನಿತ್ಯ ರಾಸಾಯನಿಕ ಮುಕ್ತ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಡಾ.ಶ್ರೀದೇವಿ ಅನ್ನಪೂರ್ಣ ಸಿಂಗ್ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಕ್ಕಳ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿ, ಅವರಲ್ಲಿದ್ದ ಗೊಂದಲ ನಿವಾರಿಸಿದರು.
ಶಾಲೆಯ ಸಂಯೋಜನಾಧಿಕಾರಿ ಜಿ.ಎಲ್.ತ್ರಿಪುರಾಂತಕ, ನಿಲಯಪಾಲಕ ಮಹದೇವಪ್ರಸಾದ್ ಇತರರು ಇದ್ದರು.