ಜ.9 ರಂದು ಅಣಕು ಶವಯಾತ್ರೆ ಪ್ರತಿಭಟನೆ

Belliyappa
Published on

ಚಾಮರಾಜನಗರ: ಜಿಲ್ಲೆಯ 5 ತಾಲೂಕುಗಳ 53 ಗ್ರಾಮಗಳಲ್ಲಿ ಸ್ಮಶಾನಗಳನ್ನು ನಿರ್ಮಾಣ ಮಾಡುವಂತೆ ಆಗ್ರಹಿಸಿ ಜ.9 ರಂದು ದಲಿತ ಸಂಘರ್ಷ ಸಮಿತಿ (ಸ್ವಾಭಿಮಾನಿ ಪ್ರೊ. ಬಿ.ಕೃಷ್ಣಪ್ಪ ಬಣ) ವತಿಯಿಂದ ಅಣಕು ಶವಯಾತ್ರೆ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ದಸಂಸ ಜಿಲ್ಲಾ ಸಂಚಾಲಕ ಬೆಳ್ಳಿಯಪ್ಪ ತಿಳಿಸಿದರು.

ಪರಿಶಿಷ್ಟ ಜಾತಿ ಸೇರಿದಂತೆ ಇತರ ವರ್ಗದವರಿಗೆ ಅಂತ್ಯ ಸಂಸ್ಕಾರ ನೆರವೇರಿಸಲು ಜಾಗ ನೀಡಬೇಕು ಹಾಗೂ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂದು ಕಳೆದ 1 ವರ್ಷದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಈ ಕುರಿತು ಅವರು ಎಲ್ಲಾ ತಹಸಿಲ್ದಾರ್ ರವರಿಗೆ ಸೂಚನೆ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಜ.9 ರಂದು ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಮೆರವಣಿಗೆ ಹೊರಟು ಜಿಲ್ಲಾಡಳಿತ ಭವನ ತಲುಪಿ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಮುಂದಿನದಿನಗಳಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುವ ಸಚಿವ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲು ಅವಕಾಶ ಕೋರಲಾಗಿದೆ. ಅಲ್ಲಿಯೂ ಕೂಡ ಸ್ಮಶಾನ ಜಾಗ ಒದಗಿಸಲು ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಮಾದಿಗ ಸಮಾಜದ ಹೋರಾಟಗಾರ ಹುಣಸೂರು ರಾಚಪ್ಪ, ದಸಂಸ ಮುಖಂಡ ಮೂಗೂರು ಮಹದೇವಸ್ವಾಮಿ, ಕೋಡಿಪುರ ಮಾದೇಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net