

ಹಾಸನ: ನಗರದ ಬಿ.ಎಂ. ರಸ್ತೆಯಲ್ಲಿರುವ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಜ.5 ರಿಂದ 7ರ ವರೆಗೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಉತ್ಪಾದಕರಿಂದ ಬಿಲ್ಡ್ ಟೆಕ್-2024 ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಕನ್ಸಲ್ಟಿಂಗ್ ಸಿವಿಲ್ ಇಂಜಿನೀರ್ಸ್ ಹಾಗು ಆರ್ಕಿಟೆಕ್ಟ್ ಅಸೋಸಿಯೇಷನ್ ಸಂಸ್ಥಾಪಕ ಅಧ್ಯಕ್ಷ ಆರ್.ಬಿ.ದಯಾನಂದ ತಿಳಿಸಿದರು.
ಜ. 5ರ ಮಧ್ಯಾಹ್ನ 12 ಗಂಟೆಗೆ ಶಾಸಕ ಎಚ್.ಪಿ.ಸ್ವರೂಪ್ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಕಟ್ಟಡ ಸಾಮಗ್ರಿಗಳ ವಸ್ತು ಪ್ರದರ್ಶನ ಹಾಸನ ಜಿಲ್ಲೆಗೆ ಅಗತ್ಯವಾಗಿದೆ. ಯಾವ ಮದ್ಯವರ್ತಿಗಳ ಹಾವಳಿ ಇಲ್ಲದೆ ಗುಣಮಟ್ಟದ ಸಾಮಗ್ರಿಗಳು ನೇರವಾಗಿ ಗ್ರಾಹಕರಿಗೆ ತಲುಪಬೇಕೆನ್ನುವುದು ನಮ್ಮ ಉದ್ದೇಶ. ಮನೆ ಕಟ್ಟಲು ಬೇಕಾದ ಎಲ್ಲಾ ಸಾಮಾಗ್ರಿಗಳು ಒಂದೇ ಸೂರಿನಡಿ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಮೂರು ದಿನಗಳ ಕಾಲ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಬುಧವಾರ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ವಿವಿಧ ಕಂಪನಿಯ ಮನೆ ಬಾಗಿಲು, ಕಿಟಕಿ, ಬಾತ್‌ರೂಮ್, ಗ್ಲಾಸ್ ಅಂಡ್ ಫಿಟ್ಟಿಂಗ್ ಟೈಲ್ಸ್, ಸ್ವಿಚ್ಚಿಸ್ ಅಂಡ್ ಎಲೆಕ್ಟ್ರಿಕಲ್ ಫಿಟ್ಟಿಂಗ್ಸ್, ಸೋಫಾ ಮತ್ತು ಡೈನಿಂಗ್ ಟೇಬಲ್, ಕಿಚನ್ ಸೆಟ್ ಮುಂತಾದವುಗಳನ್ನು ಗ್ರಾಹಕರು ನೋಡಬಹುದು. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಇಂಜಿನೀಯರ್‌ಗಳು, ಗುತ್ತಿಗೆದಾರರು, ಬಾರ್ ಬೆಂರ್ಸ್ ಅಂಡ್ ಸೆಂಟ್ರಿಂಗ್, ಕಾಪೆರ್ಂರ್ಸ್ ಭಾಗವಹಿಸಲಿದ್ದು ಅವರಿಂದಲೂ ಮಾಹಿತಿ ಪಡೆಯಬಹುದಾಗಿದೆ. ಮನೆ ಕಟ್ಟಡ ಸಾಮಗ್ರಿಗಳ ವೀಕ್ಷಣೆ ಹಾಗು ಮಾಹಿತಿ ಸಂಪೂರ್ಣ ಉಚಿತವಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕೆಂದು ಕೋರಿದರು.
ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ಕಾರ್ಯದರ್ಶಿ ಆರ್.ಬಾಬು, ಖಜಾಂಚಿ ಹೆಚ್.ಎಸ್.ಯೋಗನಾಥ, ಬಿ.ಆರ್.ಲೋಕೇಶ್, ದೀಪಕ್ ಇದ್ದರು.