

ಮೈಸೂರು: ಚಿತ್ರದುರ್ಗದ ಶ್ರೀ ಮಾಚಿದೇವ ಮಹಾಸಂಸ್ಥಾನ ಮಠದಲ್ಲಿ ಕಾಯಕ ಜನೋತ್ಸವ ಸಮಾರಂಭವನ್ನು ಜನವರಿ 5, 6ರಂದು ಹಮ್ಮಿಕೊಳ್ಳಲಾಗಿದೆ.
5ರಂದು ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶ್ರೀಮಠದ ಶಿಲಾ ಮುಖ್ಯ ಮಹಾದ್ವಾರ ಮತ್ತು ಕಾರ್ಯಕ್ರಮವನ್ನು ಉದ್ಘಾಟಿಸುವರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ‘ಮಾಚಿದೇವಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
6ರಂದು ಮಹಿಳಾ ಸಮಾವೇಶ, ಸಾಂಸ್ಕೃತಿಕ ಸಂಭ್ರಮ, ಸಾಧಕರ ಸಮಾವೇಶ ನಡೆಯಲಿದೆ. ಕಲಾಮೇಳಗಳೊಂದಿಗೆ ಶರಣ ವೀರ ಗಣಾಚಾರಿ ಮಡಿವಾಳ ಮಾಚಿದೇವರ ಭಾವಚಿತ್ರ, ಪಲ್ಲಕ್ಕಿ ಉತ್ಸವ ಜರುಗಲಿದೆ. ಭಕ್ತರು ಎರಡು ದಿನಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕೋರಿದರು.
ಮಡಿವಾಳರ ಸಮುದಾಯ ಅಸಂಘಟಿತವಾಗಿದ್ದು, ಹಕ್ಕುಗಳಿಂದ ವಂಚಿತವಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಸಿಎಂಗೆ ಸಮುದಾಯದ ಹಕ್ಕು, ಅಹವಾಲು ಸಲ್ಲಿಸಲಾಗುವುದು. ಜತೆಗೆ, ಸಮುದಾಯದವರನ್ನು ಒಗ್ಗೂಡಿಸುವ ಉದ್ದೇಶವನ್ನೂ ಹೊಂದಲಾಗಿದೆ. ಸುಮಾರು 1.50 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ವಿವರಿಸಿದರು.