ಜ.30 ರಿಂದ ಫೆ.13 ವರೆಗೆ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ

bkt-29-6
Published on

ಬಾಗಲಕೋಟೆ: ಜಿಲ್ಲೆಯಾದ್ಯಂತ ಜನವರಿ 30 ರಿಂದ ಫೆಬ್ರವರಿ 13ರ ವರೆಗೆ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನವನ್ನು ಅಚ್ಚುಕಟ್ಟಾಗಿ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಂಜುನಾಥ ಡಿ.ಎನ್ ಹೇಳಿದರು.

ಜಿಲ್ಲಾ ಪಂಚಾಯತ್ ಹಳೆಯ ಸಭಾಂಗಣದಲ್ಲಿ ಬುಧವಾರ ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನ ಕುರಿತ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನವನ್ನು ಯಶಸ್ವಿಗೊಳಿಸುವ ಮೂಲಕ ಜಿಲ್ಲೆಯನ್ನು ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿಸಲು ಸಂಕಲ್ಪ ತೊಡಬೇಕು ಎಂದು ಹೇಳಿದರು.

ಶಾಲಾ-ಕಾಲೇಜುಗಳಲ್ಲಿ ಸ್ಪರ್ಶ ಕುಷ್ಠರೋಗ ಕುರಿತು ಜಾಗೃತಿ ಮೂಡಿಸಬೇಕು. ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯು ಈ ಆಂದೋಲನ ಅವಧಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ರೋಗದ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು. ಕುಷ್ಠ ರೋಗಿಗಳನ್ನು ಪತ್ತೆ ಹಚ್ಚಿ ಅವರಿಗೆ ಚಿಕಿತ್ಸೆ ಕೊಡಿಸಬೇಕು ಎಂದು ತಿಳಿಸಿದರು. ದೇಹದ ಯಾವುದೇ ಭಾಗದಲ್ಲಿ ಸ್ಪರ್ಶಜ್ಞಾನವಿಲ್ಲದ ತಿಳಿ, ಬಿಳಿ ಅಥವಾ ತಾಮ್ರ ಬಣ್ಣದ ಮಚ್ಚೆಗಳಿದ್ದಲ್ಲಿ ಅದು ಕುಷ್ಠರೋಗದ ಲಕ್ಷಣಗಳಾಗಿವೆ ಎಂಬುದರ ಬಗ್ಗೆ ಜನತೆಗೆ ತಿಳಿಸಬೇಕು ಎಂದರು.

ಕುಷ್ಠರೋಗಕ್ಕೆ ಬಹುವಿಧ ಔಷÀಧಿ ಚಿಕಿತ್ಸೆ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ದೊರೆಯುತ್ತದೆ. ಕುಷ್ಠರೋಗದ ಬಗ್ಗೆ ಯಾರೂ ತಾರತಮ್ಯ ಬೇಧಭಾವ ಮಾಡಬಾರದು. ಕುಷ್ಠರೋಗಿಗಳು ಶಾಪಗ್ರಸ್ಥರಲ್ಲ. ಕಳಂಕಿತರಲ್ಲ ಎನ್ನುವಂತಹ ವಿಷಯಗಳ ಬಗ್ಗೆ ಜನತೆಗೆ ತಿಳಿಸಿ ಮನವರಿಕೆ ಮಾಡಬೇಕು. ಕುಷ್ಠರೋಗದ ಬಗ್ಗೆ ಜನರಲ್ಲಿರುವ ತಪ್ಪು ತಿಳಿವಳಿಕೆಗಳನ್ನು ಹೋಗಲಾಡಿಸಬೇಕು. ಕಷ್ಠರೋಗದಿಂದ ಯಾರೂ ಸಹ ಬಾಧಿತರಾಗದಂತೆ ನೋಡಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಿಲ್ಲೆಯಲ್ಲಿ ಗೃಹ ಆರೋಗ್ಯ ಯೋಜನೆಯಡಿ ಮನೆ-ಮನೆ ಸರ್ವೇ ಮಾಡಿ ಅಧಿಕ ರಕ್ತದೊತ್ತಡ, ಡಯಾಬಿಟಿಸ್, ಓರಲ್ ಕ್ಯಾನ್ಸರ್ ಮತ್ತು ಸರ್ವೇಕಲ್ ಕ್ಯಾನ್ಸರಗಳ ಬಗ್ಗೆ ಮಾಹಿತಿ ಪಡೆಯಲಾಗುವುದು ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲಣಾಧಿಕಾರಿ ಡಾ.ಶಿವನಗೌಡ ಪಾಟೀಲ ಸಭೆಗೆ ಮಾಹಿತಿ ನೀಡಿದರು.

ಜಿಲ್ಲೆಯ ಜನತೆಯಾದ ನಾವು ಮತ್ತು ಜಿಲ್ಲಾಡಳಿತವು ಈ ಮೂಲಕ ನಮ್ಮ ಜಿಲ್ಲೆಯನ್ನು ಕುಷ್ಠರೋಗ ಮುಕ್ತಮಾಡಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತೇವೆಂದು ಘೋಷಿಸುತ್ತೇವೆ. ಸಾಧ್ಯವಾದಷ್ಠು ಮುಂಚೆಯೇ ಎಲ್ಲಾ ಕುಷ್ಠರೋಗ ಪ್ರಕರಣಗಳನ್ನು ಕಂಡುಹಿಡಿಯಲು ನಾವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ. ಜಿಲ್ಲೆಯಲ್ಲಿ ಇದನ್ನು ಸಾಧಿಸಲು ಲಭ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ನಾವು ಬಳಸುತ್ತೇವೆ. ಕುಷ್ಠರೋಗದಿಂದ ಬಳಲುತ್ತಿರುವ ವ್ಯಕ್ತಿಗಳ ಜೊತೆ ನಾವು ಯಾವುದೇ ರೀತಿಯ ತಾರತಮ್ಯ ಮಾಡುವುದಿಲ್ಲ. ಮತ್ತು ಇತರರು ಕೂಡ ತಾರತಮ್ಯ ಮಾಡಲು ಅವಕಾಶ ನೀಡುವುದಿಲ್ಲವೆಂದು ಘೋಷಿಸುತ್ತೇವೆ. ನಾವು ವೈಯಕ್ತಿಕವಾಗಿ ಹಾಗೂ ಒಟ್ಟಾಗಿ ಕುಷ್ಠರೋಗ ಪೀಡಿತ ವ್ಯಕ್ತಿಗಳ ವಿರುದ್ಧ ಕಳಂಕ ಮತ್ತು ತಾರತಮ್ಯ ಕೊನೆಗೊಳಿಸಲು ಕೆಲಸ ಮಾಡುತ್ತೇವೆ. ಮತ್ತು ಅವರುಗಳನ್ನು ಮುಖ್ಯವಾಹಿನಿಗೆ ತರಲು ಸಹಕಾರ ನೀಡುತ್ತೇವೆ ಎಂದು ಸಭೆಯಲ್ಲಿ ಪ್ರತಿಜ್ಞಾವಿಧಿಯನ್ನು ಸ್ಚೀಕರಿಸಲಾಯಿತು. ನಂತರ ಬಿತ್ತಿ ಪತ್ರ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಡಿ.ಟಿ.ಒ .ಡಾ ಸುವರ್ಣ ಕುಲಕರ್ಣಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ದಯಾನಂದ ಕರೆಣ್ಣವರ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಅರವಿಂದ ಪಟ್ಟಣಶೇಟ್ಟಿ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net