ಜ.21 ದಾಸೋಹ ದಿನವನ್ನಾಗಿ ಘೋಷಿಸಿ ; ಶ್ರೀ ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ ಹಿನ್ನೆಲೆ ಅಭಿಯಾನಕ್ಕೆ ಧ್ವನಿ

DSC_5045
Published on

ತುಮಕೂರು: ಕಾಯಕ-ದಾಸೋಹ ಮಹತ್ವವನ್ನು ಸಾಧಿಸಿ ತೋರಿದ ಸಿದ್ಧಗಂಗಾ ಮಠದ ಲಿಂ.ಶ್ರೀ ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ ದಿನವಾದ ಜ.21ರಂದು ರಾಜ್ಯ ಸರ್ಕಾರವು ‘ದಾಸೋಹದಿನ’ವನ್ನಾಗಿ ಘೋಷಿಸುವಂತೆ ರಾಜ್ಯದೆಲ್ಲೆಡೆ ಕೂಗು ಎದ್ದಿದೆ.

2019ರ ಜ.21ರಂದು ಸಿದ್ಧಗಂಗೆಯ ಶಿವಕುಮಾರ ಶ್ರೀಗಳು ಶಿವಸಾನ್ನಿಧ್ಯ ಸೇರಿದ್ದು, 111 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿದ ಶ್ರೀಗಳು ಲಕ್ಷಾಂತರ ಬಡಮಕ್ಕಳಿಗೆ ಅನ್ನ, ಶಿಕ್ಷಣ, ಆಶ್ರಯ ಕಲ್ಪಿಸಿ ತ್ರಿವಿಧ ದಾಸೋಹಿ ಎನಿಸಿದ್ದರು. ಶ್ರೀಗಳು ಲಿಂಗೈಕ್ಯರಾದ ದಿನವನ್ನು ‘ದಾಸೋಹದಿನ’ವಾಗಿ ಘೋಷಿಸುವಂತೆ ಶಿವಗಂಗೆಯ ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಅವರು ಶ್ರೀಗಳ ಪ್ರಥಮ ಪುಣ್ಯಸ್ಮರಣೆ ದಿನ ರಾಜ್ಯ ಸರ್ಕಾರದ ಗಮನಸೆಳೆದಿದ್ದರು.

ಈಗ ಶ್ರೀಗಳ 2ನೇ ಪುಣ್ಯ ಸಂಸ್ಮರಣೋತ್ಸವ ಸಂದರ್ಭದಲ್ಲಿ ‘ದಾಸೋಹದಿನ’ ಘೋಷಣೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುವ ಅಭಿಯಾನ ರಾಜ್ಯದೆಲ್ಲ್ಲೆಡೆ ವ್ಯಾಪಕವಾಗಿ ನಡೆಯುತ್ತಿದೆ. ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ರಾಜ್ಯ ಯುವ ವಿಭಾಗ, ವೀರಶೈವ ಲಿಂಗಾಯತ ಯುವ ವೇದಿಕೆ, ಕನ್ನಡಪರ ಸಂಘಟನೆಗಳು, ವಿವಿಧ ಜಿಲ್ಲೆಯಲ್ಲಿರುವ ಶ್ರೀಮಠದ ಹಳೆಯ ವಿದ್ಯಾರ್ಥಿ ಸಂಘಟನೆಗಳು ದಾಸೋಹ ದಿನ ಅಭಿಯಾನಕ್ಕೆ ದೊಡ್ಡಮಟ್ಟದ ಧ್ವನಿಗೂಡಿಸಿವೆ.

ಕಾಯಕ ದಾಸೋಹ ಸಿದ್ಧಾಂತವನ್ನು ಜೀವಂತಗೊಳಿಸಿ ಎಲ್ಲರ ಮನೆ ಮನಸ್ಸಿನಲ್ಲಿ ನೆಲೆ ನಿಲ್ಲುವಂತೆ ಮಾಡಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಶ್ರಯ ಶಿಕ್ಷಣ ದಾಸೋಹ ಕಲ್ಪಿಸಿ ಪ್ರತಿದಿನ 10 ಸಾವಿರ ಮಕ್ಕಳಿಗೆ ಪ್ರಸಾದ ನೀಡುತ್ತಿರುವ ಸಿದ್ಧಗಂಗಾ ಮಠವು ದಾಸೋಹದ ಮಹಾಮನೆ ಎನಿಸಿದೆ. ಕೈಲಾದಷ್ಟು ದಾಸೋಹ ಸೇವೆ ಮಾಡುವ ಮೂಲಕ ಶ್ರೀಗಳ ಸ್ಮರಣೆಗೈಯ್ಯಲು ಭಕ್ತರು ನಿರ್ಧರಿಸಿರುವುದು ವಿಶೇಷವೆನಿಸಿದೆ.

ಶ್ರೀಗಳ ಸಾಧನೆಗೆ ಪಠ್ಯ ಗೌರವ ಸಿಗಲಿ: ಪೂಜ್ಯರ ಬದುಕು ದೇಶದಾದ್ಯಂತ ಪ್ರತಿಯೊಂದು ಶಾಲಾ-ಕಾಲೇಜುಗಳಲ್ಲಿ ‘ಸಿಲೆಬಸ್’ ಆಗಲಿ. ಸರ್ಕಾರವು ಪೂಜ್ಯರ ಬದುಕನ್ನು ಪ್ರತಿಯೊಂದು ಶಾಲಾ-ಕಾಲೇಜುಗಳಲ್ಲಿ ಪಠ್ಯವಾಗಿಸಬೇಕು. ಪ್ರಶಸ್ತಿ ಗೌರವಕ್ಕಿಂತ ‘ಪಠ್ಯಗೌರವ’ ದೊಡ್ಡದು. ಪ್ರಶಸ್ತಿ ಗೌರವ ಪೂಜ್ಯರನ್ನು ಇನ್ನಷ್ಟು, ಮತ್ತಷ್ಟು ದೊಡ್ಡವರನ್ನಾಗಿಸಬಹುದು. ಶ್ರೀಗಳಿಗೆ ‘ಭಾರತರತ್ನ’ ಪ್ರಶಸ್ತಿ ಕೊಡಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸುವುದಕ್ಕಿಂತ, ಪೂಜ್ಯರ ಬದುಕನ್ನು ದೇಶದಾದ್ಯಂತ ಪ್ರತಿಯೊಂದು ಶಾಲಾ-ಕಾಲೇಜುಗಳಲ್ಲಿ ಪಠ್ಯವಾಗಿಸಬೇಕು ಎಂದು ಆಗ್ರಹಿಸಬೇಕು. ಹಾಗೆಂದು ದುಂಬಾಲು ಬೀಳಬೇಕು. ಆ ಮೂಲಕ ದೇಶದ ಪ್ರತಿಯೊಂದು ಮಗು ಹಾಗೂ ಈ ದೇಶದ ಭವ್ಯ ಭವಿಷ್ಯತ್ತಿನ ಪ್ರತಿಯೊಬ್ಬ ಯುವಕ ಪರಮಪೂಜ್ಯರ ಬದುಕನ್ನು ಕಡ್ಡಾಯವಾಗಿ ಓದುವಂತೆ ಮಾಡಬೇಕು ಎಂದು ತುಮಕೂರು ಹಿರೇಮಠ ಡಾ.ಶಿವಾನಂದ ಶಿವಾಚಾರ್ಯರು ಸಲಹೆ ನೀಡಿದ್ದಾರೆ.

ಸರ್ಕಾರ ಎಲ್ಲ ಶಾಲಾ-ಕಾಲೇಜುಗಳ ಮಕ್ಕಳಿಗೆ ಪೂಜ್ಯರ ಸಾಧನೆ ಸೇವೆ ತಿಳಿಸಿ ದಾಸೋಹ ದಿನವನ್ನಾಗಿ ಘೋಷಿಸಬೇಕು. ಲಕ್ಷಾಂತರ ವಿದ್ಯಾರ್ಥಿಗಳು ಆಶ್ರಯ, ಶಿಕ್ಷಣ, ಅನ್ನ ದಾಸೋಹ ಕಲ್ಪಿಸಿದ ಶಿವಕುಮಾರ ಶ್ರೀಗಳ ಸಂಸ್ಮರೋಣತ್ಸವ ದಿನವನ್ನು ದಾಸೋಹ ದಿನವನ್ನಾಗಿ ಸರ್ಕಾರ ಘೋಷಿಸಲಿ. ಪ್ರಶಾಂತ್ ಕಲ್ಲೂರ್ ರಾಜ್ಯಾಧ್ಯಕ್ಷ, ವೀರಶೈವ ಲಿಂಗಾಯತ ಯುವ ವೇದಿಕೆ ಕಾಯಕ-ದಾಸೋಹ ಮಹತ್ವವನ್ನು ಸಾಧಿಸಿ ತೋರಿದ ಸಿದ್ಧಗಂಗಾ ಮಠದ ಲಿಂ.ಶ್ರೀಶಿವಕುಮಾರ ಸ್ವಾಮೀಜಿ ಅವರು ಲಿಂಗೈಕ್ಯರಾಗಿ ಜ.21ಕ್ಕೆ ಎರಡು ವರ್ಷ ಆಗುತ್ತಿರುವ ಹಿನ್ನೆಲೆಯಲ್ಲಿ ಈ ದಿನವನ್ನು ದಾಸೋಹ ದಿನವನ್ನಾಗಿ ಆಚರಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿ ಪತ್ರ ಬರೆಯಲಾಗಿದೆ. ಶ್ರೀರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೊನ್ನಮ್ಮಗವಿ ಮಠ,ಶಿವಗಂ ಶ್ರೀಗಳು ಲಿಂಗೈಕ್ಯರಾಗಿ ಜ.21ಕ್ಕೆ 2 ವರ್ಷಗಳು. ಶಿವಕುಮಾರ ಶ್ರೀಗಳ ನಿತ್ಯ ದಾಸೋಹದ ತತ್ವದ ಕೈಂಕರ್ಯವನ್ನು ಸ್ಮರಿಸಲು ರಾಜ್ಯ ಸರ್ಕಾರವು ದಾಸೋಹ ದಿನವನ್ನಾಗಿ ಘೋಷಿಸಬೇಕು. ಬಿ.ಎಸ್.ಸಚ್ಚಿದಾನಂದಮೂರ್ತಿ ಉಪಾಧ್ಯಕ್ಷ, ಅಖಿಲ ಭಾರತ ವೀರಶೈವ ಮಹಾಸಭಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net