ಜ.20ರಂದು ಸಿದ್ದರಾಮಯ್ಯ ಶಕ್ತಿಪ್ರದರ್ಶನ

12
Published on

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜ.20 ರಂದು ಆಯೋಜಿಸಿರುವ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ 25 ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸುವ ಮುಖಾಂತರ ಸಿದ್ದರಾಮಯ್ಯ ಅವರ ಶಕ್ತಿಪ್ರದರ್ಶನ ನಡೆಸಬೇಕಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ. ಮರೀಗೌಡ ತಿಳಿಸಿದರು.
ಸಮಾವೇಶದ ಅಂಗವಾಗಿ ನಗರದ ಕಾಂಗ್ರೆಸ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಲಿಂಗದೇವರಕೊಪ್ಪಲು ಬಳಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ಅಂದು ಹಲವು ಜೆಡಿಎಸ್ ನಾಯಕರು ಯಾವುದೇ ಷರತ್ತು ಇಲ್ಲದೆ ಕಾಂಗ್ರೆಸ್ ಸೇರುತ್ತಿದ್ದಾರೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸಂಘಟಿಸಬೇಕು ಎಂದು ಹೇಳಿದರು.
ಸಿದ್ದರಾಮಯ್ಯಅವರಿಗೆ ಚಾಮುಂಡೇಶ್ವರಿಯಲ್ಲಿನ ಸೋಲು ತುಂಬ ನೋವುಂಟುಮಾಡಿದೆ. ಆ ನೋವನ್ನು ಮರೆಸಬೇಕಾದರೆ 2023ರ ಚುನಾವಣೆಯಲ್ಲಿ ಅಭ್ಯರ್ಥಿ ಯಾರೇ ಆದರೂ 50 ಸಾವಿರ ಮತಗಳ ಅಂತರದಿಂದ ಗೆದ್ದು ತೋರಿಸಬೇಕು. ಆದ್ದರಿಂದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಅವರು ಆಯ್ಕೆ ಮಾಡುವ ಅಭ್ಯರ್ಥಿಯನ್ನು ಎಲ್ಲರೂ ಒಗ್ಗಟ್ಟಿನಿಂದ ಗೆಲ್ಲಿಸಬೇಕು ಎಂದು ಕೆ. ಮರೀಗೌಡ ಹೇಳಿದರು.
ಲಿಂಗದೇವರಕೊಪ್ಪಲು ಬಳಿ ನಡೆಯುವ ಸಮಾವೇಶಕ್ಕೆ ಹಿನಕಲ್‌ನ ಗಣಪತಿ ದೇವಸ್ಥಾನದಿಂದ ಮೆರವಣಿಗೆ ಪ್ರಾರಂಭವಾಗುತ್ತದೆ. ಎರಡು ಸಾವಿರ ಬೈಕ್‌ಗಳಲ್ಲಿ ಕಾರ್ಯಕರ್ತರು ರ‌್ಯಾಲಿ ಮುಖಾಂತರ ಸಾವಿರದ ಒಂದು ಕಳಸ ಹೊತ್ತು ಮಹಿಳೆಯರು ಹಾಗೂ 180 ಜನರ ಕಲಾತಂಡ ಮೆರವಣಿಗೆಯಲ್ಲಿ ಇರಲಿವೆ. ಈ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸೇರ್ಪಡೆಯಾಗುತ್ತಿರುವ ಕಾರ್ಯಕರ್ತರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಅಧಿಕಾರಕ್ಕೆ ಬರುವುದು ಖಚಿತ:
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ ಮಾತನಾಡಿ, 2023ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಎಲ್ಲರೂ ಸಮಾವೇಶವನ್ನು ಯಶಸ್ವಿಗೊಳಿಸೋಣ ಎಂದರು.
ಜಿ.ಪಂ. ಮಾಜಿ ಸದಸ್ಯರಾದ ಪಟೇಲ್ ಜವರೇಗೌಡ, ಕೂರ್ಗಳ್ಳಿ ಮಹಾದೇವ್, ಅರುಣ್‌ಕುಮಾರ್, ಮುಖಂಡರಾದ ಕೃಷ್ಣಕುಮಾರ್ ಸಾಗರ್, ಜೆ.ಜೆ. ಆನಂದ್, ಕೆಂಚಪ್ಪ, ಕೋಟೆಹುಂಡಿ ಮಹದೇವ, ಟಿ.ಬಿ. ಚಿಕ್ಕಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜು, ಶ್ರೀಕಂಠ ತೊಂಡೇಗೌಡ, ನಾಗವಾಲ ನರೇಂದ್ರ, ಹೊಸಹುಂಡಿ ರಘು, ಮೆಲ್ಲಹಳ್ಳಿ ಮಹಾದೇವಸ್ವಾಮಿ, ನಾರಾಯಣ, ಬೆಳವಾಡಿ ಲಕ್ಷ್ಮಣ್, ಲೋಕೇಶ್, ಧನಗಳ್ಳಿ ಬಸವರಾಜು, ಹಿನಕಲ್ ಪ್ರಕಾಶ್, ಉಮಾಶಂಕರ್, ಸಿದ್ದರಾಜು, ಹಂಚ್ಯಾ ಸಣ್ಣಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ್ಷರಾದ ಬಿ. ಗುರುಸ್ವಾಮಿ, ಸತೀಶ್‌ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net