

ಮೈಸೂರು: ನಗರದ ದೊಡ್ಡಕೆರೆ ಮೈದಾನದಲ್ಲಿ ನಡೆಯುತ್ತಿರುವ ದಸರಾ ವಸ್ತುಪ್ರದರ್ಶನದ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.
ಸೆ.26ರಿಂದ ಆರಂಭಗೊಂಡಿರುವ ಪ್ರದರ್ಶನವು ಪೂರ್ವ ನಿಗದಿಯಂತೆ ಡಿ.24ಕ್ಕೆ ಕೊನೆಗೊಳ್ಳಬೇಕಿತ್ತು. ಇದೀಗ ಜ.1ರವರೆಗೆ ವಿಸ್ತರಣೆ ಮಾಡಲಿದ್ದು, ಇನ್ನೂ ಒಂದು ವಾರ ಹೆಚ್ಚಿನ ಅವಕಾಶ ದೊರೆತಂತಾಗಿದೆ.
ಪ್ರತಿ ದಿನ ಸರಾಸರಿ 10 ಸಾವಿರ ಹಾಗೂ ವಾರಾಂತ್ಯ, ಸಾರ್ವತ್ರಿಕ ರಜಾ ದಿನಗಳಲ್ಲಿ 15 ಸಾವಿರದಿಂದ 20 ಸಾವಿರ ಜನರು ವಸ್ತುಪ್ರದರ್ಶನ ವೀಕ್ಷಿಸಲು ಭೇಟಿ ನೀಡುತ್ತಿದ್ದಾರೆ.
ಕ್ರಿಸ್‌ಮಸ್ ಹಾಗೂ ವರ್ಷಾಂತ್ಯದ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ. ನಿಗದಿತ ದಿನಾಂಕಕ್ಕೆ ವಸ್ತುಪ್ರದರ್ಶನವನ್ನು ಮುಕ್ತಾಯಗೊಳಿಸಿದರೆ ಮೈಸೂರಿಗೆ ಬರುತ್ತಿರುವ ಪ್ರವಾಸಿಗರಿಗೆ ನಿರಾಸೆಯಾಗಲಿದೆ. ಆದ್ದರಿಂದ ಈ ಕ್ರಮ ತೆಗೆದುಕೊಳ್ಳುವ ಮೂಲಕ ವಸ್ತುಪ್ರದರ್ಶನ ವೀಕ್ಷಣೆಗೆ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ತಿಳಿಸಿದ್ದಾರೆ.
ಮತ್ತೆ ವಿಸ್ತರಿಸಬೇಕೇ ಬೇಡವೇ ಎಂಬ ಬಗ್ಗೆ ನಂತರ ನಿರ್ಧರಿಸಲಾಗುವುದು ಎಂದು ತಿಳಿಸಿದರು.