

ಹಾಸನ: ಒಕ್ಕಲಿಗರ ಉದ್ಯಮಶೀಲತೆಗೆ ಉತ್ತೇಜನ ನೀಡುವ ಸಲುವಾಗಿ ಬೆಂಗಳೂರಿನ ಫಸ್ಟ್ ಸರ್ಕಲ್ ಸೊಸೈಟಿ ವತಿಯಿಂದ ಈ ಬಾರಿಯ ಉದ್ಯಮಿ ಒಕ್ಕಲಿಗ ಎಕ್ಸ್-2024 ಜ.19 ರಿಂದ 21 ರ ವರೆಗೆ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ಗ್ರಾೃಂಡ್ ಪೆವಿಲಿಯನ್‌ನಲ್ಲಿ ಉದ್ಯಮಿ ಒಕ್ಕಲಿಗ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಉದ್ಯಮಿ ಮಂಜೇಗೌಡ ಅವರು ತಿಳಿಸಿದರು.
ಉದ್ಯಮಿ ಒಕ್ಕಲಿಗ ಎಕ್ಸ್ಪೋ-2024ನಲ್ಲಿ 100ಕ್ಕೂ ಹೆಚ್ಚು ಒಕ್ಕಲಿಗ ಉದ್ಯಮದಾರರು ತಮ್ಮ ಸೇವೆ ಮತ್ತು ಸರಕುಗಳನ್ನು ಪ್ರದರ್ಶನಕ್ಕೆ ಇಡಲಿದ್ದಾರೆ. ಸಮಾವೇಶದಲ್ಲಿ 12 ಉದ್ಯಮ ಕ್ಷೇತ್ರಗಳ ಬಗ್ಗೆ ಚಿಂತನ-ಮಂಥನ ನಡೆಯಲಿದೆ. ಕೃಷಿ, ಆರೋಗ್ಯ, ಶಿಕ್ಷಣ, ಎಂಎಸ್‌ಎಂಇ, ಮನರಂಜನೆ, ರಾಜಕೀಯ,ಸ್ಟಾೃಪ್, ಆಹಾರ-ಆತಿಥ್ಯ ಮತ್ತಿತರ ಕ್ಷೇತ್ರಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಕಾರ್ಯಕ್ರಮವನ್ನು ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ಸಮಾವೇಶದಲ್ಲಿ ಒಕ್ಕಲಿಗ ಆಹಾರ ಪದ್ಧತಿ ವಿಶೇಷ ಆಕರ್ಷಣೆ ಆಗಲಿದ್ದು, 12ಕ್ಕೂ ಹೆಚ್ಚು ಒಕ್ಕಲಿಗ ಖಾದ್ಯ ತಯಾರಕರು ತಮ್ಮ ತಿನಿಸುಗಳನ್ನು ಬಡಿಸಲಿದ್ದಾರೆ. ಜ.19ರ ಸಂಜೆ ಒಕ್ಕಲಿಗ ಸಂಸ್ಕೃತಿ ಪರಿಚಯದ ಅಂಗವಾಗಿ ದೇವಿ ಮಹಾತ್ಮೆ ಎಂಬ ಮೂಡಲಪಾಯ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ ಎಂದು ವಿವರಿಸಿದರು.
ಸಮಾವೇಶಕ್ಕೆ ತಮಿಳುನಾಡಿನಲ್ಲಿ 25 ಲಕ್ಷಕ್ಕೂ ಹೆಚ್ಚಿರುವ ಸಮುದಾಯದ 500ಕ್ಕೂ ಹೆಚ್ಚು ಉದ್ಯಮಿ ಪ್ರತಿನಿಧಿಗಳು ಭಾಗವಹಿಸಲಿದ್ದು, ಚೆನ್ನೈ, ಕೊಯಮುತ್ತೂರು, ಕೃಷ್ಣಗಿರಿ, ಹೊಸೂರು, ಥೇಣಿ ಮತ್ತು ಕಂಬಂ ಜಿಲ್ಲೆಗಳಿಂದ ಆಗಮಿಸಿದ್ದಾರೆ. ಕರ್ನಾಟಕ ತಮಿಳುನಾಡು ಒಕ್ಕಲಿಗ ಉದ್ಯಮಿಗಳ ಸಮನ್ವಯಕ್ಕಾಗಿ ಪ್ರತ್ಯೇಕ ಚರ್ಚೆ ಹಾಗು ಸಮನ್ವಯ ಸಮಿತಿ ಆಯೋಜಿಸಲಾಗಿದೆ. ಮೂರು ದಿನಗಳ ಸಮಾವೇಶದಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದು, ಗಂಗವಾಡಿ 96000 ರಾಜವಂಶದ ಲಾಂಛನವನ್ನು ಸಮಾವೇಶದ ಕೇಂದ್ರ ಆಕರ್ಷಣೆಯಾಗಿ ಬಳಸಲಾಗುತ್ತಿದೆ. ಸಮಾವೇಶದಲ್ಲಿ ಒಕ್ಕಲಿಗ ವ್ಯಾಪಾರಿಗಳ ಡಿಜಿಟಲ್ ಮಾರುಕಟ್ಟೆ ಹಾಗು ಒಕ್ಕಲಿಗ ಉದ್ಯಮಿಗಳ ಜಾಲತಾಣ ಜನಾರ್ಪಣೆಗೊಳ್ಳಲಿದೆ ಎಂದು ತಿಳಿಸಿದರು.
ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಉಪಾಧ್ಯಕ್ಷ ಹೆಚ್.ಟಿ.ಕಿರಣ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಸ್.ಎಸ್.ರಘುಗೌಡ, ಟೈಮ್ಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಬಿ.ಕೆ.ಗಂಗಾಧರ್, ಭರತ್ ಕುಮಾರ್ ಹಾಜರಿದ್ದರು.