ಜ.18 ರಂದು ಅಮಿತ್ ಶಾ ವಿರುದ್ಧ ಪ್ರತಿಭಟನೆ

Nagashilpa
Published on

ಚಾಮರಾಜನಗರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಭಾರತೀಯ ಬೌದ್ಧ ಮಹಾಸಭಾ ಮಹಿಳಾ ವಿಭಾಗ ಹಾಗೂ ವಿವಿಧ ಮಹಿಳಾ ಸಂಘಟನೆಗಳ ವತಿಯಿಂದ ಜ.18 ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಬೌದ್ಧ ಮಹಾಸಭಾ ಮಹಿಳಾ ವಿಭಾಗದ ಜಿಲ್ಲಾ ಉಪಾಧ್ಯಕ್ಷೆ ನಾಗಶಿಲ್ಪ ಉಮೇಶ್ ಕುದರ್ ತಿಳಿಸಿದರು.

ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಬೆಳಗ್ಗೆ 10 ಗಂಟೆಗೆ ಸಮಾವೇಶಗೊಂಡು ಅಲ್ಲಿಂದ ಮೆರವಣಿಗೆ ಹೊರಟು, ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುತ್ತದೆ. ಈ ಪ್ರತಿಭಟನೆಯಲ್ಲಿ ಸ್ವಾಭಿಮಾನಿ ಮಹಿಳಾ ಸಂಘಟನೆಗಳು ಭಾಗವಹಿಸಿ ಯಶಸ್ವಿಗೊಳಿಸಿಕೊಡಬೇಕು ಎಂದು ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಕೇಂದ್ರ ಕಾನೂನು ಸಚಿವರಾಗಿದ್ದಾಗ ಮಹಿಳೆಯರ ಸಮಗ್ರ ಅಭಿವೃದ್ಧಿಗಾಗಿ ಹಿಂದು ಕೋಡ್ ಬಿಲ್ ಮಂಡಿಸಿದ್ದರು. ಮಹಿಳಾ ವಿರೋಧಿಗಳಾದ ಮನುವಾದಿಗಳು ಇದನ್ನು ಜಾರಿಮಾಡಲು ಬಿಡಲಿಲ್ಲ. ಈ ಕಾರಣಕ್ಕಾಗಿ ಕಾನೂನು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.ಮಹಾಮಾನವತಾವಾದಿಯಾದ ಬಾಬಾ ಸಾಹೇಬರ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ಮಾತನಾಡಿರುವ ಮಾತುಗಳು ನಮಗೆ ತೀವ್ರ ನೋವು ಉಂಟುಮಾಡಿದೆ. ಆದ್ದರಿಂದ ಅವರು ನೈತಿಕ ಹೊಣೆ ಹೊತ್ತು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಬೇಕು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

ಗೋಷ್ಠಿಯಲ್ಲಿ ರಮಾಬಾಯಿ ಸಂಘದ ಅಧ್ಯಕ್ಷೆ ಪುಷ್ಷ ಮರಿಸ್ಚಾಮಿ, ಮಹಿಳಾ ಒಕ್ಕೂಟದ ಅಧ್ಯಕ್ಷೆ ಎ.ನಾಗಮಣಿ, ಪ್ರಧಾನ ಕಾರ್ಯದರ್ಶಿ ಶಾಹಿದಾಬಾನು, ನಗರಸಭಾ ಮಾಜಿ ಉಪಾಧ್ಯಕ್ಷೆ ವಹೀದಾ ಖಾನಂ, ವುಮೆನ್ಸ್ ಇಂಡಿಯಾ ಮೂಮೆಂಟ್‌ನ ಆಯಿಶಾಉದಾ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net