ಜ.12ಕ್ಕೆ ಆಲೂರು ತೃತೀಯ ಸಾಹಿತ್ಯ ಸಮ್ಮೇಳನ

IMG-20241224-WA0212
ಲೇಖಕಿ ಎಚ್.ಆರ್. ಲೀಲಾವತಿ
Published on

ಆಲೂರು: ತಾಲೂಕಿನ ಕೆ.ಹೊಸಕೋಟೆ ಹೋಬಳಿ ಹರಿಹಳ್ಳಿ ಕೆಂಚಾಂಬ ದೇವಸ್ಥಾನ ಆವರಣದಲ್ಲಿ ಜ.12ರಂದು ಆಲೂರು ತಾಲೂಕು ತೃತೀಯ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು ತಿಳಿಸಿದರು.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ.), ಬೆಂಗಳೂರು ಕೇಂದ್ರ ಸಮಿತಿಯ ಮಾರ್ಗದರ್ಶನದಲ್ಲಿ ಈಗಾಗಲೇ ಎರಡು ತಾಲೂಕು ಸಮ್ಮೇಳನ, ಕೃತಿ ಬಿಡುಗಡೆ, ಕೃತಿ ವಿಮರ್ಶೆಗಳು, ವಿಚಾರಗೋಷ್ಠಿಗಳು, ಕವಿಗೋಷ್ಠಿಗಳು, ಗಣ್ಯ ಸಾಹಿತಿಗಳ ದಿನಾಚರಣೆಗಳು, ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಹಲವಾರು ಮೌಲಿಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಗಿದೆ. ಸದ್ಯ ತೃತೀಯ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಾಲೂಕಿನ ಗ್ರಾಮೀಣ ಭಾಗವಾದ ಹರಿಹಳ್ಳಿ ಭಾಗದಲ್ಲಿ ಸ್ಥಳೀಯರ ಸಹಕಾರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈಗಾಗಲೇ ಎರಡು ಸಮ್ಮೇಳನಗಳಿಗೆ ಎಸ್.ಎಂ.ದೇವರಾಜೇಗೌಡ ಹಾಗೂ ಎಂ.ಶಿವಣ್ಣ ಅವರನ್ನು ಸರ್ವಾಧ್ಯಕ್ಷರನ್ನಾಗಿ ಮಾಡಲಾಗಿತ್ತು. ತೃತೀಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಹಿರಿಯ ಪತ್ರಕರ್ತೆ, ಲೇಖಕಿ ಎಚ್.ಆರ್. ಲೀಲಾವತಿ ಅವರನ್ನು ಆಯ್ಕೆ ಮಾಡಲಾಗಿದೆ. ತೃತೀಯ ಸಮ್ಮೇಳನಕ್ಕೆ ಮಹಿಳೆಯನ್ನು ಮಾತ್ರ ಪರಿಗಣಿಸಬೇಕೆಂಬ ಉದ್ದೇಶದಿಂದ ಎಚ್.ಆರ್.ಲೀಲಾವತಿ ಅವರ ಜತೆಗೆ ಸಮ್ಮೇಳನದ ಸರ್ವಾಧ್ಯಕ್ಷತೆಗೆ ಉದಯೋನ್ಮುಖ ಲೇಖಕಿ, ಪತ್ರಕರ್ತೆ ಡಿ. ಸುಜಲಾದೇವಿ, ಕವಯಿತ್ರಿ ನಂದಿನಿ ಹೆದ್ದುರ್ಗ ಮುಂತಾದವರ ಹೆಸರುಗಳು ಪ್ರಮುಖವಾಗಿ ಚರ್ಚೆಯಾದರೂ ಎಚ್.ಆರ್.ಲೀಲಾವತಿ ಅವರ ಹಿರಿತನ, ಮಾಧ್ಯಮ ಹಾಗೂ ಸಾಹಿತ್ಯ ಕ್ಷೇತ್ರದ ಸೇವೆ ಪರಿಗಣಿಸಿ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ತಾಲೂಕಿನ ಸಮಸ್ತ ಜನತೆ, ಸಾಹಿತ್ಯಾಸಕ್ತರು ಸಮ್ಮೇಳನದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕೋರಿದರು.

ವೇದಿಕೆಯ ತಾಲೂಕು ಅಧ್ಯಕ್ಷ ಮಣಿಪುರ ಕೃಷ್ಣೇಗೌಡ, ಗೌರವಾಧ್ಯಕ್ಷ ಎಂ.ಬಾಲಕೃಷ್ಣ, ಗೌರವ ಸಲಹೆಗಾರರಾದ ಎಸ್.ಎಸ್.ಶಿವಮೂರ್ತಿ, ಉಪಾಧ್ಯಕ್ಷ ಡಿ.ಸಿ.ಬಸವರಾಜ್, ಸಾಹಿತಿ ಸತ್ಯನಾರಾಯಣ ಹರಿಹಳ್ಳಿ ಸೇರಿದಂತೆ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net