

ಹುಬ್ಬಳ್ಳಿ: ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯ ಜನರೇ ನಿರ್ವಿುಸಿ, ನಿರ್ದೇಶಿಸಿ, ನಟಿಸಿರುವ ‘ಛೋಟಾ ಬಾಂಬೆ’ ಸಿನಿಮಾದ ಧ್ವನಿಸುರುಳಿ ಶನಿವಾರ ನಗರದ ಸವಾಯಿ ಗಂಧರ್ವ ಹಾಲ್ನಲ್ಲಿ ಪ್ರೇಕ್ಷಕರ ಸಂಭ್ರಮದ ನಡುವೆ ಬಿಡುಗಡೆಯಾಯಿತು.
ಮಾಜಿ ಶಾಸಕ ಅಶೋಕ ಕಾಟವೆ, ನಿರ್ವಪಕ ಹಾಗೂ ನಿರ್ದೇಶಕ ಯೂಸೂಫ್ ಖಾನ್ ಧ್ವನಿಸುರುಳಿ ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಸಿನಿಮಾದ 5 ಹಾಡುಗಳನ್ನು ಪ್ರದರ್ಶಿಸಲಾಯಿತು. ‘ಚುಟು ಚುಟು ಅಂತೈತೆ..‘ ಹಾಡಿನ ಖ್ಯಾತಿಯ ಶಿವು ಬೇರ್ಗಿ ರಚಿಸಿ, ಸಂಗೀತ ನೀಡಿರುವ ‘ಚಡ್ಡಿದೋಸ್ತರು ನಾವು ಚಡ್ಡಿದೋಸ್ತರು’ ಹಾಡಿಗೆ ಪ್ರೇಕ್ಷಕರು ಫಿದಾ ಆದರು.
ಅಶೋಕ ಕಾಟವೆ ಮಾತನಾಡಿ, ನಾನೂ ಕೂಡ ಹಿಂದೆ ಮಿನರ್ವ ವಿಡಿಯೋ ಎಂಬ ಹೆಸರಿನ ಸಂಸ್ಥೆ ಆರಂಭಿಸಿದ್ದೆ. ವಿಡಿಯೋ ಕ್ಯಾಸೆಟ್ನ ಚಿತ್ರಗಳ ಹಕ್ಕುಸ್ವಾಮ್ಯ ಪಡೆದು ಹಂಚಿಕೆ ಮಾಡುತ್ತಿದ್ದೆ. ಸಿನಿಮಾ ನಿರ್ಮಾಣ ಎಷ್ಟು ಕಷ್ಟದ ಕೆಲಸ ಎಂಬುದು ಆಗ ನನಗೆ ಅರ್ಥವಾಗಿತ್ತು. ಸುಮಾರು 2 ದಶಕಗಳ ಹಿಂದೆ ಈ ಭಾಗದ ಕುಂಠೆ ಮತ್ತು ಅಂಕಲಗಿ ಸ್ನೇಹಿತರು ಐದಾರು ಸಿನಿಮಾಗಳನ್ನು ನಿರ್ವಿುಸುವ ಮೂಲಕ ಖ್ಯಾತಿ ಗಳಿಸಿದ್ದರು. ಇದೀಗ ಯೂಸೂಫ್ ಖಾನ್ ಛೋಟಾ ಬಾಂಬೆ ಚಿತ್ರ ಮಾಡುವ ಮೂಲಕ ಈ ಭಾಗದ ಸಿನಿಮಾ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕಾರಿ ನಿರ್ವಪಕ ದೀಪಕ ಬೊಂಗಾಳೆ ಮಾತನಾಡಿ, ನಿರ್ದೇಶಕ ಯೂಸೂಫ್ ಖಾನ್ ಅವರು ಛೋಟಾ ಬಾಂಬೆ ಸಿನಿಮಾದ ಟೈಟಲ್ಅನ್ನು 10 ವರ್ಷದ ಹಿಂದೆಯೇ ಕಾಯ್ದಿರಿಸಿದ್ದರು. ಅಂದಿನಿಂದ ಈವರೆಗೆ ಆ ಟೈಟಲ್ ಕಾಯ್ದುಕೊಂಡು ಬಂದು ಆಸಕ್ತಿಯಿಂದ ಸಿನಿಮಾ ಮಾಡಿದ್ದಾರೆ. ಈ ಸಿನಿಮಾದಲ್ಲಿ 250 ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟಿದ್ದಾರೆ ಎಂದರು.
ಮಾಜಿ ಸೈನಿಕ ಬಸಪ್ಪ ಇಂಚಲ, ಯುನೈಟೆಡ್ ಸೆಕ್ಯುರಿಟಿ ಫೋರ್ಸ್ ಎಂಡಿ ಸಂತೋಷ ಇಂಚಲ, ಹೈಕೋರ್ಟ್ ವಕೀಲ ಎ.ಸಿ. ಚಾಕಲಬ್ಬಿ, ಸಿನಿಮಾದ ನಾಯಕ ನಟರಾದ ಸೂರಜ ಸಾಸನೂರ, ಅಭಿಷೇಕ ಜಾಲಿಹಾಳ, ನಟಿಯರಾದ ಪಲ್ಲವಿ ಬಳ್ಳಾರಿ, ಒಟಿಲಿ ಅನಬನ್, ಖಳನಟ ರಾಜ್ ಕ್ರೇಜಿ, ಸಂಗೀತ ನಿರ್ದೇಶಕ ಶಿವು ಬೇರ್ಗಿ, ಎಂ.ಎಚ್. ಶೇಖ್, ಹಂಚಿಕೆದಾರ ಗಿರೀಶ, ಅಸಾದ ಕಿತ್ತೂರ, ಮತ್ತಿತರರು ಇದ್ದರು.
ನಾನು ಧಾರವಾಡದ ಹುಡುಗ ಅದೀನಿ. ಸಿನಿಮಾದಾಗ ಅಂಡರ್ ವರ್ಲ್ಡ್ ಪಾತ್ರ ನಂದು. ಧಾರವಾಡ ಭಾಷೆದಾಗ ಹೆಚ್ಚು ನನ್ನ ಡೈಲಾಗ್ ಅದಾವ. ಇದು ನನ್ನ ಮೊದಲ ಸಿನಿಮಾ ಆದರೂ ಯೂಸೂಫ್ ಖಾನ್ ಅವರು ಅದ್ಭುತವಾಗಿ ನಟನಾ ಮಾಡಿಸ್ಯಾರ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ. | ಸೂರಜ ಸಾಸನೂರ, ನಾಯಕ ನಟ