ಛಾಯಾಚಿತ್ರಗಳು ಈಗ ಬದುಕಿನ ಭಾಗವೇ ಆಗಿವೆ: ಶಾಸಕ ಟಿ.ಎಸ್.ಶ್ರೀವತ್ಸ

5
Published on

ಮೈಸೂರು: ಜೀವನದ ಘಟನೆಗಳನ್ನು ಸೆರೆ ಹಿಡಿದು ಮುಂದಿನ ತಲೆಮಾರಿಗೆ ನೆನಪುಗಳನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡುವ ಛಾಯಾಚಿತ್ರಗಳು ಬದುಕಿನ ಭಾಗವೇ ಆಗಿವೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಅಭಿಪ್ರಾಯಪಟ್ಟರು.
ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ಶನಿವಾರ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಛಾಯಾಗ್ರಾಹಕ ಸುತ್ತೂರು ನಂಜುಂಡನಾಯಕ ಅವರನ್ನು ಸನ್ಮಾನಿಸಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಛಾಯಾಚಿತ್ರ, ವಿಡಿಯೋ ಇಲ್ಲದ ದಿನ, ಸ್ಥಳಗಳೇ ಇಲ್ಲ. ಎಲ್ಲ ದೃಶ್ಯ, ಘಟನೆಗಳು ಸೆರೆಯಾಗುತ್ತಲೇ ಇರುತ್ತಿವೆ. ಯಾವುದೇ ಘಟನೆಗಳು ಮುಂದಿನ ಪೀಳಿಗೆಗೆ ನೋಡಲು ಚಿತ್ರ ಸಹಿತ ಸಿಗುತ್ತವೆ ಎಂದರು.
ರಾಜಕಾರಣಿಗಳಿಗೆ ತಮ್ಮ ಸಭೆ, ಕಾರ್ಯಕ್ರಮಗಳಲ್ಲಿ ಛಾಯಾಗ್ರಾಹಕರಿಲ್ಲದಿದ್ದರೆ ಅದನ್ನು ಊಹಿಸಿಕೊಳ್ಳಲು ಅಸಾಧ್ಯ ಎನಿಸುವಂತಾಗುತ್ತದೆ. ವನ್ಯಜೀವಿಗಳ ಛಾಯಾಚಿತ್ರ ಸೆರೆ ಹಿಡಿಯಲು ಕಾಡಿನ, ವನ್ಯಜೀವಿಗಳ ನಡುವೆ ಛಾಯಾಗ್ರಾಹಕರು ಮಾಡುವ ಸಾಹಸ ರೋಮಾಂಚಕಕಾರಿಯಾಗಿರುತ್ತದೆ. ಇತರ ಛಾಯಾಚಿತ್ರಗಳೂ ಪತ್ರಿಕೆಗಳ ಮೂಲಕ ರಾಜ್ಯದ ಗಮನ ಸೆಳೆಯುತ್ತವೆ ಎಂದರು.
ತಂತ್ರಜ್ಞಾನ ಮುಂದುವರಿದಂತೆ ಕ್ಯಾಮರಾಗಳಲ್ಲಿಯೂ ಅತ್ಯಾಧುನಿಕ ಆವಿಷ್ಕಾರಗಳು ನಡೆಯುತ್ತಿವೆ. ಹಿಂದೆ ಕೆಲವರ ಬಳಿ ಮಾತ್ರ ಇದ್ದ ಕ್ಯಾಮರಾಗಳು ಇಂದು ಮೊಬೈಲ್ ಮೂಲಕ ಪ್ರತಿಯೊಬ್ಬರ ಕೈಯಲ್ಲಿಯೂ ಇವೆ. ಹೀಗಾಗಿ ನೈಪುಣ್ಯ ಇದ್ದರಷ್ಟೇ ಛಾಯಾಗ್ರಹಣ ಕ್ಷೇತ್ರದಲ್ಲಿ ಬೇಡಿಕೆ ಬಂದು ಯಶಸ್ಸು ಸಾಧಿಸಲು ಸಾಧ್ಯ. ಅಪರೂಪದ ಚಿತ್ರಗಳನ್ನು ಉಡುಗೊರೆ ನೀಡುವ ಪರಿಪಾಠ ಹೆಚ್ಚಾಗಲಿದೆ ಎಂದು ಎಂದು ಸಲಹೆ ನೀಡಿದರು.
ಪತ್ರಕರ್ತರ ಸಂಂಘದ ಅಧ್ಯಕ್ಷ ಎಸ್.ಟಿ. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ, ಖಜಾಂಚಿ ನಾಗೇಶ್ ಪಾಣತ್ತಲೆ, ರಾಜ್ಯ ಸಮಿತಿ ನಿರ್ದೇಶಕ ರಾಘವೇಂದ್ರ, ನಗರ ಕಾರ್ಯದರ್ಶಿ ರಂಗಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net