

ನಿಪ್ಪಾಣಿ: ಕಾರ್ಮಿಕ ಕಲ್ಯಾಣ ಇಲಾಖೆಯಿಂದ ಛಾಯಾಗ್ರಾಹಕರು ಮತ್ತು ವಿಡಿಯೋಗ್ರಾಫರ್‌ಗಳಿಗೂ ಕಾರ್ಮಿಕ ಕಾರ್ಡ್ ಒದಗಿಸಿರುವುದು ಅನುಕೂಲವಾಗಲಿದೆ. ಪಿಂಚಣಿ ಜತೆಗೆ ಕ್ಯಾಮರಾ ಖರೀದಿಗೆ ಸರ್ಕಾರದಿಂದ ನೆರವು ಸಹ ಸಿಗಬೇಕಾಗಿದೆ. ಅಲ್ಲದೆ ನಗರದಲ್ಲಿ ಛಾಯಾಗ್ರಾಹಕರ ಭವನ ನಿರ್ಮಿಸಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಮೊದಲ ಹಂತವಾಗಿ ೧೦ ಲಕ್ಷ ರೂ. ಅನುದಾನ ಕಲ್ಪಿಸಿ, ಉಳಿದ ಅನುದಾನಕ್ಕಾಗಿ ಪ್ರಯತ್ನಿಸಲಾಗುವುದು ಎಂದು ಶಾಸಕಿ ಶಶಿಕಲಾ ಜೊಲ್ಲೆ ಭರವಸೆ ನೀಡಿದರು.
ನಗರದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ನಿಪ್ಪಾಣಿ ಛಾಯಾಗ್ರಾಹಕರ ಸಂಘದ ಸದಸ್ಯರಿಗೆ ಕಾರ್ಮಿಕ ಕಾರ್ಡ್ ವಿತರಣೆ, ನೋಂದಣಿ ಪ್ರಮಾಣಪತ್ರ ಹಾಗೂ ಗಣ್ಯರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಡಿಜಿಟಲ್ ಯುಗದಲ್ಲಿ ೬ ತಿಂಗಳಿಗೊಮ್ಮೆ ತಂತ್ರಜ್ಞಾನ ಬದಲಾಗುತ್ತಿದ್ದು, ಬದಲಾವಣೆಗೆ ತಕ್ಕಂತೆ ಛಾಯಾಗ್ರಾಹಕರು ಬದಲಾಗಬೇಕು. ಅವರಿಗೆ ಸರ್ಕಾರದ ವಿವಿಧ ಯೋಜನೆಗಳನ್ನು ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದರು.
ಸ್ಥಳೀಯ ನಗರಸಭೆ ಅಧ್ಯಕ್ಷೆ ಸೋನಲ್ ಕೊಠಡಿಯಾ ಮಾತನಾಡಿ, ಛಾಯಾಗ್ರಾಹಕರ ಸಮುದಾಯ ಭವನಕ್ಕೆ ಸೂಕ್ತ ನೆರವು ನೀಡಲಾಗುವುದು ಎಂದರು.
ಬೆಳಗಾವಿ ಕಾರ್ಮಿಕ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ಜೋಗೂರ, ಅಧಿಕಾರಿ ಎನ್. ಕಳಸಣ್ಣವರ, ರಾಜ್ಯ ಛಾಯಾಗ್ರಾಹಕ ಅಸೋಸಿಯೇಶನ್ ಸಂಚಾಲಕ ಮಲ್ಲಿಕಾರ್ಜುನ, ಜಿಲ್ಲಾ ಅಸೋಸಿಯೇಶನ್ ಅಧ್ಯಕ್ಷ ಲಕ್ಷ್ಮಣ ಯಮಕನಮರಡಿ ಮಾತನಾಡಿದರು.
ನಗರಸಭೆ ಉಪಾಧ್ಯಕ್ಷ ಸಂತೋಷ ಸಾಂಗಾವಕರ, ಸ್ಥಾಯಿ ಸಮಿತಿ ಚೇರ್ಮನ್ ಡಾ. ಜಸರಾಜ್ ಗಿರೆ, ಸದಸ್ಯ ವಿಲಾಸ ಗಾಡಿವಡ್ಡರ, ರಾಜೇಶ ಕೊಠಡಿಯಾ, ಬಂಡಾ ಘೋರ್ಪಡೆ, ಸಂಘದ ಉಪಾಧ್ಯಕ್ಷ ವಿನಾಯಕ ಪಾಟೀಲ, ಸದಸ್ಯ ಮಾರುತಿ ಘಾಟಗೆ, ಸದಾಶಿವ ಪರಗಾವೆ, ಗಣಪತಿ ಕುಂಬಾರ, ವಿಜಯ ದೇವಣೆ, ನಂದಕುಮಾರ ಚೆಂಡಕೆ, ಸಂಘದ ಚೇರ್ಮನ್ ನರೇಂದ್ರ ಬಾಡಕರ, ಕಾರ್ಯದರ್ಶಿ ಸಂಜಯ ಸೂರ್ಯವಂಶಿ ಇತರರಿದ್ದರು.