ಛಾಯಾ ಭಗವತಿಯತ್ತ ನಿಸರ್ಗ ಪ್ರಿಯರು

23-07kodekal01
Published on

ಪವನ ದೇಶಪಾಂಡೆ ಕೊಡೇಕಲ್
ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಹರಿಯುತ್ತಿರುವ ನೀರಿನ ಹೊರಹರಿವಿನ ಪ್ರಮಾಣ ಕಡಿಮೆಯಾದ ಕಾರಣ ಜಲಾಶಯದ ಕೆಳ ಭಾಗದಲ್ಲಿರವ ಪ್ರವಾಸಿ ಸ್ಥಳವಾದ ಶ್ರೀ ಛಾಯಾ ಭಗವತಿ ಪ್ರಕೃತಿ ಮಡಿಲಲ್ಲಿ ಕಲ್ಲು ಬಂಡೆಗಳ ನಡುವೆ ಸೀಳಿಕೊಂಡು ಹತ್ತು ಹಲವು ಜಲಾಪಾತಗಳನ್ನ ಸೃಷ್ಟಿ ಮಾಡುತ್ತಾ ಮುಂದೆ ಸಾಗುತ್ತಿರುವ ಕೃಷ್ಣೆಯ ವೈಯಾರವನ್ನು ನೋಡಲು ನಿಸರ್ಗ ಪ್ರೇಮಿಗಳು ಛಾಯಾದತ್ತ ಹೆಜ್ಜೆ ಹಾಕಿದ್ದಾರೆ.

ಶನಿವಾರ ಬೆಳಗ್ಗೆ 11ರ ವರೆಗೆ ತೆರೆಯಲಾದ ಜಲಾಶಯದ ಎಲ್ಲ ಗೇಟ್ಗಳನ್ನು ಬಂದ್ ಮಾಡುವ ಮೂಲಕ ಕೇವಲ ಮುರುಡೇಶ್ವರ ವಿದ್ಯುತ್ ಉತ್ಪಾದನಾ ಘಟಕದ ಮೂಲಕ 6 ಸಾವಿರ ಕ್ಯೂಸೆಕ್ ಪ್ರಮಾಣದ ನೀರು ನದಿಗೆ ಹರಿಸುತ್ತಿರುವುದರಿಂದ ಕೃಷ್ಣೆ ಅತ್ಯಂತ ಶಾಂತಳಾಗಿ ಹರಿಯುತ್ತಿದ್ದಾಳೆ.

ಅದರಲ್ಲೂ ಕೂಡ ಸಮೀಪದ ಛಾಯಾ ಭಗವತಿ ದೇವಸ್ಥಾನದ ಹತ್ತಿರ ಕಲ್ಲು ಬಂಡೆಗಳ ಮಧ್ಯೆ ಹರಿಯುವ ಕೃಷ್ಣೆ ಹಲವು ಜಲಪಾತಗಳನ್ನು ಸೃಷ್ಟಿಕೊಂಡು ಮುಂದೆ ಸಾಗುತ್ತಿರುವುದು ನೋಡಲು ಎರಡು ಕಣ್ಣು ಸಾಲದು.

ಮನಮೋಹಕ ಜಲಪಾತಗಳು: ಸುಂದರವಾಗಿ ನಾಜುಕಿನಿಂದ ಕಲ್ಲು ಬಂಡೆಗಳನ್ನು ಸೀಳಿಕೊಂಡು ಅಂಕು ಡೊಂಕಾಗಿ ನರ್ತಿಸುವ ಮಾದರಿಯಲ್ಲಿ ಹರಿಯುತ್ತಿರುವ ಕೃಷ್ಣೆಯ ರಮಣೀಯ ದೃಶ್ಯ ಸವಿಯಲು ಪ್ರವಾಸಿಗರು ಛಾಯಾ ಭಗವತಿಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಕೆಲವೆಡೆ ಕೃಷ್ಣೆ ವೇಗದಿಂದ ಸಾಗಿದರೆ ಸಮತಟ್ಟಾದ ಪ್ರದೇಶದಲ್ಲಿ ಶಾಂತವಾಗಿ ಹರಿಯುತ್ತಾಳೆ.
ಕೆನೆ ಭರಿತ ಹಾಲಿನಂತೆ ಧಬ ಧಬನೆ ಕೆಳಗೆ ಬಿಳುತ್ತಿರವ ನೋಟ ಕಣ್ಣಿಗೆ ತಂಪೆರೆಯುತ್ತಿದೆ. ಇನ್ನು ಕೆಲವು ಕಡೆಗಳಲ್ಲಿ ನೀರು ಹನಿ ಹನಿಯಾಗಿ ಬೀಳುತ್ತಿರುವುದು ಮುತ್ತಿನ ಹನಿಗಳೇ ಬೀಳುತ್ತಿವೆ ಎಂದು ಭಾಸವಾಗುತ್ತಿದೆ. ದಕ್ಷಿಣ ಕಾಶಿಯೆಂದೆ ಕರೆಯಲ್ಪಡುವ ಕಲ್ಲು ಬಂಡೆಗಳ ಮಧ್ಯೆ ಛಾಯಾ ಭಗವತಿ ಕೃಷ್ಣೆತಟದಲ್ಲಿ ನೆಲೆಸಿದ್ದು, ಸುತ್ತಲು ಹಸಿರು ಗಿಡಗಳಿಂದ ಆವರಿಸಿಕೊಂಡಿದೆ. ಮೈದುಂಬಿಕೊಂಡು ಹರಿಯುವ ಕೃಷ್ಣೆ ಇಲ್ಲಿ ಎರಡು ಕವಲುಗಳಾಗಿ ಟಿಸಿಲೊಡೆದು ಸಾಗುವ ದೃಶ್ಯ ಗಮನ ಸೆಳೆಯುವಂತಿದೆ. ಪ್ರವಾಸಿಗರಿಗೆ ಜಲಾಶಯದೊಳಗಡೆ ಪ್ರವೇಶ ನಿಷೇಧಿಸಿರುವ ಕಾರಣ ಪ್ರವಾಸಿಗರು ಕಳೆದ 20 ದಿನಗಳಿಂದ ನೇರವಾಗಿ ಛಾಯಾ ಭಗವತಿಗೆ ಬಂದು ಇಲ್ಲಿನ ಪ್ರಕೃತಿ ಸೌಂದರ್ಯ ಸವಿಯುತ್ತಾ ಕೃಷ್ಣೆಯ ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net