ಛಾಯಾ ದೇವಿಗೆ ಜಲ ದಿಗ್ಬಂಧನ

ydg2
ನಾರಾಯಣಪುರ ಬಳಿಯ ಛಾಯಾ ಭಗವತಿ ದೇವಸ್ಥಾನಕ್ಕೆ ಕೃಷ್ಣಾ ನದಿ ನೀರು ನುಗ್ಗಿರುವುದು.
Published on

ಕೊಡೇಕಲ್: ಮಹರಾಷ್ಟ್ರದಲ್ಲಿ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಮಲಪ್ರಭಾ ಹಾಗೂ ಘಟಪ್ರಭಾನದಿಗಳಿಗೂ ಪ್ರವಾಹ ಏರ್ಪಟ್ಟ ಕಾರಣ ಕಾರಣ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ. ಇದರಿಂದ ಇಲ್ಲಿನ ಛಾಯಾ ಭಗವತಿ ದೇವಿಗೆ ಜಲ ದಿಗ್ಬಂಧನವಾಗಿದೆ.

ಗುರುವಾರ ಬಸವಸಾಗರ ಜಲಾಶಯಕ್ಕೆ 2.40 ಲಕ್ಷ ಕ್ಯೂಸೆಕ್ ನೀರು ಒಳಹರಿವು ಇದ್ದು, ಜಲಾಶಯದ ನೀರಿನ ಸಂಗ್ರಹಮಟ್ಟ ಕಾಯ್ದುಕೊಂಡು ಅಧಿಕಾರಿಗಳು 2.50 ಲಕ್ಷ ಕ್ಯೂಸೆಕ್ ನೀನೀರು 25 ಗೇಟು ಮತ್ತು ಎಂಪಿಸಿಎಲ್ ಮೂಲಕ ನದಿಗೆ ಹರಿಬಿಡಲಾಗಿದೆ.

ಕಳೆದ ಮೂರು ದಿನಗಳಿಂದ ಅಪಾರ ಪ್ರಮಾಣದ ನೀರು ಹರಿಸುತ್ತಿರುವುದರಿಂದ ಜಲಾಶಯದ ಕೆಳಭಾಗದಲ್ಲಿರುವ ಪವಿತ್ರ ತೀರ್ಥಯಾತ್ರಾ ಕ್ಷೇತ್ರವಾದ ಛಾಯಾ ಭಗವತಿ ದೇವಸ್ಥಾನದ ಗರ್ಭಗುಡಿ ಪ್ರವೇಶ ಮಾಡಲು ಹವಣಿಸುತ್ತಿದ್ದ ಕೃಷ್ಣೆ ಗುರುವಾರ ಯಶಸ್ವಿಯಾಗಿದ್ದಾಳೆ.

ಛಾಯಾ ದೇವಸ್ಥಾನಕ್ಕೆ ಕೃಷ್ಣೆ ಪ್ರವೇಶ ಮಾಡಿದ್ದು, ದೇವಸ್ಥಾನ ಮುಂಭಾಗದಲ್ಲಿರುವ ಮುಖ ಮಂಟಪದವರೆಗೆ ನೀರು ಹರಿಯುತ್ತಿದೆ. ರಾತ್ರಿ ಇನ್ನಷ್ಟು ನೀರು ಹರಿಯುವ ಮುನ್ಸೂಚನೆ ಇರುವ ಕಾರಣ ಛಾಯಾದೇವಿಗೆ ಜಲದಿಗ್ಬಂಧನ ಆಗುವುದರಲ್ಲಿ ಯಾವುದೇ ಸಂದೇಹಗಳಿಲ್ಲ.

ಮುನ್ನೆಚ್ಚರಿಕೆ ಕ್ರಮವಾಗಿ ಬುಧವಾರದಿಂದ ದೇವಸ್ಥಾನದ ಪುರೋಹಿತರು ದೇವಿ ಉತ್ಸವ ಮೂರ್ತಿಯೊಂದಿಗೆ ಮೆಟ್ಟಿಲು ಮೇಲೆ ಪೂಜೆ ಮಾಡುತ್ತಿದ್ದು, ಗೃಹರಕ್ಷಕಾ ದಳದ ಸಿಬ್ಬಂದಿ ಯಾರನ್ನು ಕೆಳಗೆ ಇಳಿಯದಂತೆ ಬ್ಯಾರಿಕೇಡ್ ಅಳವಡಿಸುವ ಮೂಲಕ ಸೂಕ್ತ ಬಂದೋಬಸ್ತ್ ಒದಗಿಸಿದ್ದಾರೆ.

ಭೋರ್ಗರೆಯುತ್ತಿರುವ ಕೃಷ್ಣೆ: ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುತ್ತಿರುವುದರಿಂದ ಕೃಷ್ಣಾ ನದಿಗೆ ಪ್ರವಾಹ ಸ್ಥಿತಿ ಮತ್ತಷ್ಟು ಹೆಚ್ಚಾಗಿದೆ. ನದಿ ತೀರದ ಗ್ರಾಮಗಳಾದ ಜುಮಾಲಪುರ ದೊಡ್ಡ ತಾಂಡಾ, ಜುಮಾಲಪುರ, ಬಂಡೊಳ್ಳಿ, ತಿಥಣಿ, ಅಮ್ಮಾಪುರ, ಬೆಂಚಿಗಡ್ಡಿ, ದೇವರಗಡ್ಡಿ, ಮೇಲಿನಗಡ್ಡಿ, ನೀಲಕಂಠರಾಯನಗಡ್ಡಿ, ಶೆಳ್ಳಗಿ, ಮುಷ್ಠಳ್ಳಿ, ಚೌಡೇಶ್ವರಿಹಾಳ, ಸೇರಿ ಇತರ ಗ್ರಾಮಗಳ ಜನತೆಗೆ ಆತಂಕ ಹೆಚ್ಚಾಗಿದೆ. ರಾತ್ರಿ ವೇಳೆ ನದಿಗೆ ಇನ್ನಷ್ಟು ಹೆಚ್ಚಿನ ಪ್ರಮಾಣದ ನೀರು ಹರಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರಿಂದ ಈ ಗ್ರಾಮಗಳ ಜನರಿಗೆ ಆತಂಕ ಮತ್ತಷ್ಟು ಜೋರಾಗಿದೆ. ನದಿ ತೀರದ ಕೆಲ ಗ್ರಾಮಗಳ ಜಮೀನಿಗೆ ನೀರು ನುಗ್ಗುವ ಸಾಧ್ಯತೆ ಇದ್ದು, ನೀಲಕಂಠರಾಯನಗಡ್ಡಿಗೂ ನೀರು ನುಗ್ಗುವ ಲಕ್ಷಣ ಹೆಚ್ಚಾಗಿ ಗೋಚರಿಸುತ್ತಿವೆ.
ಪ್ರವಾಹ ಬರುವಂತೆ ನಮ್ಮಲ್ಲಿ ಮಳೆಯಾಗದಿದ್ದರೂ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದ ಕೃಷ್ಣೆಗೆ ಪ್ರವಾಹ ಉಂಟಾಗಿ ಇನ್ನಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಹಾಗಂತ ಯಾರು ನಿರ್ಲಕ್ಷಿಸುವಂತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net