

ಬೇಲೂರು: ಕ್ರೀಡೆ, ಕೆಲಸ ಯಾವುದೇ ಇದ್ದರೂ ಛಲದಿಂದ ತಮ್ಮನ್ನು ತಾವು ಸಂಪೂರ್ಣ ತೊಡಗಿಸಿ ಕೊಂಡಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್ ಹೇಳಿದರು.
ಶಾಲಾ ಶಿಕ್ಷಣ ಮತ್ತು ಸಾರ್ವಜನಿಕ ಇಲಾಖೆಯಿಂದ ಮಂಗಳವಾರ ಬೇಲೂರು ಪಟ್ಟಣದ ಸರ್ವೋದಯ ಪ್ರೌಢಶಾಲೆಯಲ್ಲಿ ಕ್ರೀಡೆಯಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕ್ರೀಡೆಯಲ್ಲಿ ಬೇಲೂರು ತಾಲೂಕಿನ 50 ಬಾಲಕ, ಬಾಲಕಿಯರು ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಸಾಧನೆಯ ಹಿಂದಿರುವ ದೈಹಿಕ ಶಿಕ್ಷಣ ಶಿಕ್ಷಕರು, ತರಬೇತುದಾರರು ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ನೀಡಿದ್ದಾರೆ ಎಂದರು.
ಸರ್ವೋದಯ ವಿದ್ಯಾಸಂಸ್ಥೆ ಅಧ್ಯಕ್ಷ ಪ್ರಕಾಶ್ ಮಾತನಾಡಿ, ಪ್ರತಿಯೊಬ್ಬರೂ ಒಂದಲ್ಲೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿದರೆ ಅವಕಾಶಗಳೇ ಹುಡುಕಿ ಬರುತ್ತವೆ. ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುತ್ತೇನೆ ಎನ್ನುವ ಜತೆಗೆ ಅದನ್ನು ಸಾಧಿಸಿಯೇ ತೀರುತ್ತೇನೆಂಬ ದೃಢ ಸಂಕಲ್ಪದೊಂದಿಗೆ ಮುನ್ನಡೆಯಬೇಕು. ಸಿಕ್ಕ ಅವಕಾಶಗಳನ್ನು ಸದೂಪಯೋಗ ಪಡಿಸಿಕೊಂಡರೆ ತಕ್ಕ ಪ್ರತಿಫಲ ಸಿಗುತ್ತದೆ ಎಂದರು.
ದೈಹಿಕ ಶಿಕ್ಷಣ ಪರಿವೀಕ್ಷಕ ಫಾಲಾಕ್ಷಮೂರ್ತಿ, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ರಾಘವೇಂದ್ರ ಹೊಳ್ಳ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ನಾಗರಾಜು, ತಾಲೂಕು ಅಧ್ಯಕ್ಷ ಲೋಕೇಶ್‌ಗೌಡ, ಕಾರ್ಯದರ್ಶಿ ರವೀಂದ್ರ, ಶಿಕ್ಷಕರ ಸಂಘದ ತಾಲೂಕು ನಿರ್ದೇಶಕರಾದ ಭದ್ರೇಗೌಡ, ಆನಂದ್, ಸರ್ವೋದಯ ಶಾಲೆ ಮುಖ್ಯ ಶಿಕ್ಷಕ ಗಿರೀಶ್ ಇತರರು ಇದ್ದರು.