ಛಲವಾದಿ ನಾರಾಯಣಸ್ವಾಮಿ, ರವಿಕುಮಾರ್ ಎಂಎಲ್‌ಸಿ ಸ್ಥಾನ ರದ್ದಿಗೆ ಪ್ರತಿಭಟನೆ

mysore
Published on

ಮೈಸೂರು: ದಲಿತ, ಹಿಂದುಳಿದ, ಅಲ್ಪಸಂಖ್ಯಾತ ನಾಯಕರ ಏಳಿಗೆಯನ್ನು ಸಹಿಸದ ಬಿಜೆಪಿ ದಲಿತ ವಿರೋಧಿ ನೀತಿ ಖಂಡನೀಯ ಮತ್ತು ಕೀಳು ಮಟ್ಟದ ಭಾಷೆ ಬಳಸಿರುವ ಛಲವಾದಿ ನಾರಾಯಣಸ್ವಾಮಿ, ಎನ್.ರವಿಕುಮಾರ್ ಅವರ ವಿಧಾನಪರಿಷತ್ ಸದಸ್ಯತ್ವ ರದ್ದುಪಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಯಿತು.

ಪ್ರಿಯಾಂಕ್ ಖರ್ಗೆ ಅವರು ಎತ್ತಿರುವ ಸಂವಿಧಾನಬದ್ಧ ಮತ್ತು ಸೈದ್ಧಾಂತಿಕ ಪ್ರಶ್ನೆಗಳಿಗೆ ಉತ್ತರಕೊಡುವ ಸಾಮರ್ಥ್ಯವನ್ನು ಮನುವಾದಿಗಳು ತೋರಿಲ್ಲ. ಆದರೆ, ಅವರ ನಿಂದನೆಗೆ ಇಳಿದಿರುವುದು ನಾಚಿಕೆಗೇಡಿನ ಸಂಗತಿ. ತಮ್ಮ ಸೋಲನ್ನು ಮುಚ್ಚಿಕೊಳ್ಳಲು ಕೆಲ ದಲಿತ ಮನುವಾದಿಗಳನ್ನು ಮುಂದೆ ಬಿಡುತ್ತಿದ್ದಾರೆ.

ಇಂತಹ ದಲಿತ ಮನುವಾದಿಗಳು ತಮ್ಮ ಸ್ವಾಭಿಮಾನವನ್ನು ಅಡವಿಟ್ಟು ಬಿಜೆಪಿ, ಆರ್‌ಎಸ್‌ಎಸ್ ಜೀತ ಮಾಡುತ್ತಿದ್ದಾರೆ. ಇವರು ಸಂವಿಧಾನ ಮತ್ತು ಅಂಬೇಡ್ಕರ್ ವಿರೋಧಿಗಳು ಎಂದು ಕಿಡಿಕಾರಿದರು.

ಇಂತಹವರಲ್ಲಿ ಛಲವಾದಿ ನಾರಾಯಣಸ್ವಾಮಿ ಒಬ್ಬರು. ಇಂತಹವರಿಂದ ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ಸಂಘ ಪರಿವಾರವು ಕೊಡಿಸುತ್ತಿದೆ. ಅಂಬೇಡ್ಕರ್ ಸ್ವಾಭಿಮಾನಿ ಸಮುದಾಯವು ಇವರ ನಡವಳಿಕೆಯನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾಗೆಯೇ, ವಿಧಾನ ಪರಿಷತ್‌ನ ಪ್ರತಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಇತ್ತೀಚೆಗೆ ಕಲಬುರಗಿಯಲ್ಲಿ ಪ್ರಿಯಾಂಕ್ ಖರ್ಗೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಅಲ್ಲಿಯ ಜಿಲ್ಲಾಧಿಕಾರಿ ಅವರು ಪಾಕಿಸ್ತಾನದಿಂದ ಬಂದವರಂತೆ ಕಾಣುತ್ತಿದ್ದಾರೆ ಎಂಬ ಪದವನ್ನು ಬಳಸಿದ್ದಾರೆ.

ಈ ಅವಮಾನಕಾರಿ ಹೇಳಿಕೆ ನೀಡಿರುವುದನ್ನು ಹೈಕೋರ್ಟ್ ಸಹ ಗಂಭೀರವಾಗಿ ಪರಿಗಣಿಸಿ ಕ್ಷಮೆಯಾಚಿಸುವಂತೆ ರವಿಕುಮಾರ್ ಅವರಿಗೆ ತಾಕೀತು ಮಾಡಿದೆ.

ಆದ್ದರಿಂದ ರವಿಕುಮಾರ್, ಛಲವಾದಿ ನಾರಾಯಣಸ್ವಾಮಿ ತಮ್ಮ ಸ್ಥಾನದಲ್ಲಿ ಮುಂದುವರಿಯಲು ಅನರ್ಹರಾಗಿದ್ದಾರೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಗೋವಿಂದರಾಜು, ರಾಜಣ್ಣ ಇಟ್ನ, ಸುರೇಶ್ ಯರಗನಹಳ್ಳಿ, ಕೃಷ್ಣ ಕೋಳಘಟ್ಟ, ಪುಟ್ಟಸ್ವಾಮಿ, ರಾಜು ಇನ್ನಿತರರು ಇದ್ದರು

*8

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಸದಸ್ಯರು ಪ್ರತಿಭಟನೆ ನಡೆಸಿದರು. ಗೋವಿಂದರಾಜು, ರಾಜಣ್ಣ ಇಟ್ನ, ಸುರೇಶ್ ಯರಗನಹಳ್ಳಿ, ಕೃಷ್ಣ ಕೋಳಘಟ್ಟ, ಪುಟ್ಟಸ್ವಾಮಿ, ರಾಜು ಇನ್ನಿತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net