ಛಲವಾದಿ ಎಂದೇ ನಮೂದಿಸಲು ಸಮುದಾಯದವರಿಗೆ ಸಲಹೆ

CTD H.C.NIRAJANA MURTY-----
Published on

ಚಿತ್ರದುರ್ಗ: ಒಳಮೀಸಲು ವರ್ಗೀಕರಣಕ್ಕೆ ರಾಜ್ಯದಲ್ಲಿ ನಡೆಯುತ್ತಿರುವ ಪರಿಶಿಷ್ಟ ಸಮುದಾಯದ ಜಾತಿ ಗಣತಿ ವೇಳೆ ಛಲವಾದಿ ಎಂದು ನಮೂದಿಸುವಂತೆ ನಗರಸಭೆ ಮಾಜಿ ಅಧ್ಯಕ್ಷ, ಸಮುದಾಯದ ಮುಖಂಡ ಎಚ್.ಸಿ. ನಿರಂಜನಮೂರ್ತಿ ಛಲವಾದಿ ಸಮುದಾಯದವರಿಗೆ ಮನವಿ ಮಾಡಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಳಮೀಸಲಾತಿ ಜಾರಿಗಾಗಿ ದತ್ತಾಂಶ ಸಂಗ್ರಹದ ಅಗತ್ಯವಿದೆ. ಆದ್ದರಿಂದ ಸಮುದಾಯದವರು ಛಲವಾದಿ ಎಂದು ನಮೂದಿಸಬೇಕು. ಮುಜುಗರ ಬೇಡ, ಎಲ್ಲರೂ ಜಾತಿ ಗಣತಿಯಲ್ಲಿ ತಪ್ಪದೇ ಭಾಗವಹಿಸ ಬೇಕು. ಬೂತ್ ಮಟ್ಟದಲ್ಲೂ ಸಮೀಕ್ಷೆ ನಡೆಯಲಿದೆ ಎಂದರು.

ಗಣತಿ ಕಾರ್ಯಹಳ್ಳಿಗಳಲ್ಲಿ ಉತ್ತಮವಾಗಿದೆ. ನಗರ ಪ್ರದೇಶದಲ್ಲಿ ನಮ್ಮ ಸಮುದಾಯಕ್ಕೆ ಹಿನ್ನಡೆಯಾಗುತ್ತಿದೆ ಎಂದು ಆತಂಕ ವ್ಯಕ್ತ ಪಡಿಸಿದರು.

ಗಣತಿದಾರರು ಕೆಲ ಬಡಾವಣೆಗಳಲ್ಲಿ ಸರಿಯಾಗಿ ಸಮೀಕ್ಷೆ ಮಾಡುತ್ತಿಲ್ಲ, ಸರಿಯಾಗಿ ಗಣತಿ ಮಾಡದಿದ್ದರೆ ಅಥವಾ ತಪ್ಪಾಗಿ ನಮೂದಿಸಿದರೆ ಅಂಥವರ ವಿರುದ್ಧ ಜಿಲ್ಲಾಧಿಕಾರಿ ಕ್ರಮ ಜರುಗಿಸಬೇಕಿದೆ ಎಂದರು.

ರಾಜ್ಯದಲ್ಲಿ ನಮ್ಮ ಸಮುದಾಯದವರ ಮೇಲಿನ ರಾಜಕೀಯ ಪ್ರೇರಿತ ದಾಳಿಗಳನ್ನು ಸಮುದಾಯ ಖಂಡಿಸಬೇಕಾಗುತ್ತದೆ. ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿ ಮೂಲಕ ಕೇಂದ್ರ ಅವರನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮುದಾಯದ ಮತ್ತೊಬ್ಬ ನಾಯಕ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಬೆಂಬಲಕ್ಕೂ ಸಮುದಾಯ ನಿಲ್ಲಲಿದೆ ಎಂದರು.

ನಿವೃತ್ತ ಸಹಾಯಕ ಕೃಷಿ ನಿರ್ದೆಶಕ ವೆಂಕಟೇಶ್ ಮಾತನಾಡಿ, ಪರಿಶಿಷ್ಟ ಜಾತಿ ಸಮೀಕ್ಷೆಯಲ್ಲಿ ನಮ್ಮ ಸಮುದಾಯದವರು ಸಕ್ರಿಯವಾಗಿ ಭಾಗವಹಿಸಬೇಕಿದೆ ಎಂದರು. ಸಮುದಾಯದ ಮುಖಂಡರಾದ ಗುರುಮೂರ್ತಿ, ಭಾರ್ಗವಿ ದ್ರಾವಿಡ, ವಕೀಲ ಅಪ್ಪಣ್ಣ, ರವಿಕುಮಾರ್, ದಯಾನಂದ, ಎನ್.ಶಶಾಂಕ್ ಇತರರು ಇದ್ದರು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net