

ಮೈಸೂರು: ವೈದ್ಯಕೀಯ ಜೀವನದಲ್ಲಿ ಧೃತಿಗೆಡದೆ ಛಲದೊಂದಿಗೆ ಮುಂದುವರಿಯಬೇಕು ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಕೆ.ರಮೇಶ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಪ್ರದಾನ ಭಾಷಣ ಮಾಡಿದರು.
ಕಾಲೇಜು ಜೀವನ ಹಾಗೂ ವೃತ್ತಿ ಜೀವನ ಭಿನ್ನ. ವೃತ್ತಿಯಲ್ಲಿ ಪ್ರತಿ ಕ್ಷಣವೂ ಹೊಸ ವಿಚಾರವನ್ನು ಕಲಿಯುವ ಆಸಕ್ತಿಯೊಂದಿಗೆ ಕೆಲಸ ಮಾಡಿದರೆ ಮಾತ್ರ ಯಶಸ್ಸು ದೊರಕುತ್ತದೆ. ಹೊಸ ವಿಚಾರಗಳ ಕಲಿಕೆಯ ಆಸಕ್ತಿಯುಳ್ಳವರು ಶಕ್ತಿಯುತ ನಾಯಕರಾಗಿ ಬೆಳೆಯುತ್ತಾರೆ. ವೈದ್ಯಕೀಯ ಜೀವನದಲ್ಲಿ ನಡೆಯುವ ಅನಿರೀಕ್ಷಿತ ಘಟನೆಗಳು ನಮ್ಮ ಸೋಲಿಗೂ ಕಾರಣವಾಗಬಹುದು. ಆದರೆ ಅದರಿಂದ ಧೃತಿಗೆಡದೆ ಮುನ್ನಡೆಯಬೇಕು ಎಂದರು.
ಬಹಳ ಬೇಗ ಯಶಸ್ವಿಯಾಗಬೇಕೆಂದು ಅಡ್ಡದಾರಿ ಹಿಡಿಯಬಾರದು. ಅದು ನಮ್ಮ ವೃತ್ತಿ ಜೀವನಕ್ಕೆ ಕೆಟ್ಟ ಹೆಸರು ತರಬಹುದು. ಕಠಿಣ ಪರಿಶ್ರಮ ಹಾಗು ಮಿತ್ರರನ್ನು ಬೆಳೆಸುವ ಗುಣವು ನಮ್ಮನ್ನೂ ಸಾಧಕರ ಹಾದಿಗೆ ಕೊಂಡೊಯ್ಯುತ್ತದೆ. ವೈದ್ಯಕೀಯ ವೃತ್ತಿಯಲ್ಲಿ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಕಾಲೇಜಿನ ನಿರ್ದೇಶಕಿ ಹಾಗೂ ಡೀನ್ ದಾಕ್ಷಾಯಣಿ, ಆಡಳಿತ ನಿರ್ದೇಶಕರಾದ ಡಾ.ಎ.ಎಚ್. ಹರೀಶ್, ಹೇಮಾ ನಂದೀಶ್, ಶಿಕ್ಷಕರ ಸಂಘದ ಅಧ್ಯಕ್ಷ ಡಾ.ಬಿ.ಎನ್.ಆನಂದ ರವಿ, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಡಾ.ಎಸ್.ಚಂದ್ರಶೇಖರ್, ಕಾರ್ಯದರ್ಶಿ ಡಾ.ಎಚ್.ಬಿ.ಶಶಿಧರ್ ಇತರರು ಇದ್ದರು.