

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರತಿಯೊಬ್ಬನಲ್ಲಿ ಛಲ, ಆತ್ಮವಿಶ್ವಾಸ ಇದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ರಾಯಚೂರಿನ ಯಶಸ್ವಿ ರೈತ ಮಹಿಳೆ ಕವಿತಾ ಮಿಶ್ರಾ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿಜ್ಞಾನ ಕಾಲೇಜು ವತಿಯಿಂದ ಸೃಜನಾ ರಂಗಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ 2022-23ನೇ ಶೈಕ್ಷಣಿಕ ವರ್ಷದ ಜಿಮಖಾನಾದ ಸಾಂಸ್ಕೃತಿಕ ಮತ್ತು ವಿವಿಧ ಕ್ರೀಡಾ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರೈತ ಬಿಸಲು, ಮಳೆ ಎನ್ನದೆ ಕಾಯಕ ಮಾಡಿದಾಗ ಮಾತ್ರ ಪ್ರತಿಫಲ ಸಿಗಲಿದೆ. ಜೀವನದಲ್ಲಿ ಸವಾಲು ಎದುರಿಸಬೇಕು. ನಾನು ಅನೇಕ ಸಮಸ್ಯೆ, ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿದ್ದರಿಂದಲೇ ಯಶಸ್ವಿ ರೈತ ಮಹಿಳೆ ಆಗಿದ್ದೇನೆ. ವಿದ್ಯಾರ್ಥಿಗಳು ವಿದ್ಯೆ ಜತೆಗೆ ಕೃಷಿಗೆ ಆದ್ಯತೆ ನೀಡಬೇಕು. ತಂದೆ-ತಾಯಿ ಬಯಕೆ ಪೂರೈಸಬೇಕು. ಕೆಲಸವನ್ನು ಅಭಿಮಾನ ಮತ್ತು ಗೌರವದಿಂದ ಕಾಣಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಜಿ.ಎಲ್. ಕಲ್ಯಾಣ ಮಾತನಾಡಿ, ಜೀವನದಲ್ಲಿ ಕಷ್ಟ ಸುಖಗಳನ್ನು ಸಮಾನವಾಗಿ ಸ್ವೀಕರಿಸಬೇಕು. ವಿದ್ಯಾರ್ಥಿಗಳು ಪಠ್ಯದ ಜತೆಗೆ ಕ್ರೀಡೆ, ಸಂಸ್ಕೃತಿ ಹಾಗೂ ಇತರ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು. ಇಂದಿನ ವಿದ್ಯಾರ್ಥಿಗಳಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಅವಶ್ಯ ಎಂದರು.
ಜಿಮಖಾನದ ಕಾರ್ಯಾಧ್ಯಕ್ಷ ಪ್ರೊ.ಎಂ.ಎಸ್. ಸಾಳುಂಕೆ ಮಾತನಾಡಿದರು. ಡಾ.ವಿ.ಬಿ. ಸಾವಿರಮಠ, ಡಾ.ಡಿ.ಬಿ. ಗೊವಿಂದಪ್ಪ, ವಿದ್ಯಾರ್ಥಿ ಕಾರ್ಯದರ್ಶಿ ಅಕ್ಷಯ ಹೆಗಡೆ, ವಿವಿಧ ವಿಭಾಗದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಇದ್ದರು.