ಛಲ ಸಾಧನೆಗೆ ದಾರಿದೀಪವಾಗಲಿ

upanyasa
ಪರ್ವತಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಉಪನ್ಯಾಸ ಮಾಲಿಕೆಯಲ್ಲಿ ಕನ್ನಡ ಅಧ್ಯಾಪಕ ಪಿ.ಜಿ. ಮೂರಬಂಡಿ ಮಾತನಾಡಿದರು. ಕಸಾಪ ಗೌರವ ಕಾರ್ಯದರ್ಶಿ ಈರಣ್ಣ ಅಲದಿ, ಸಹ ಶಿಕ್ಷಕರಾದ ಎಸ್.ಎಸ್. ಕಾರಜೋಳ, ಆರ್.ಎಂ. ನೀಲುಗಲ್ಲ, ಎಂ.ಎಚ್. ಮುಲ್ಲಾ ಇತರರಿದ್ದರು.
Published on

ಗುಳೇದಗುಡ್ಡ: ಛಲವೆಂಬುದು ಪ್ರತಿಯೊಬ್ಬರ ಜೀವನದಲ್ಲಿ ಬಂದು ಹೋಗುವ ಪ್ರಸಂಗ. ಆದರೆ, ಅದನ್ನು ಸತ್ಕಾರ್ಯಕ್ಕೆ, ಸಮಾಜಮುಖಿ ಕಾರ್ಯಕ್ಕೆ ಸದ್ವಿನಿಯೋಗ ಮಾಡಿಕೊಂಡರೆ ಸಾಧನೆಗೆ ದಾರಿದೀಪವಾಗಲು ಸಾಧ್ಯ ಎಂದು ಕನ್ನಡ ಅಧ್ಯಾಪಕ ಪಿ.ಜಿ. ಮೂರಬಂಡಿ ಹೇಳಿದರು.

ಕರ್ನಾಟಕ ಸುವರ್ಣ ಮಹೋತ್ಸವ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಹಾಗೂ ಪರ್ವತಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸರಣಿ ಉಪನ್ಯಾಸ ಮಾಲಿಕೆಯಲ್ಲಿ ರನ್ನನ ‘ಛಲಮನೆ ಮೆರೆವೆಂ’ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

ರನ್ನ ಮಹಾಕವಿಯು ಬರೆದ ಕಾವ್ಯಭಾಗದಲ್ಲಿ ಭೀಷ್ಮರು ದುರ್ಯೋದನನಿಗೆ ಸಂಧಿ ಪ್ರಸ್ತಾಪ ಮಾಡಿದಾಗ ಅಜ್ಜಾ ನಾನು ನಿಮಗೆ ನಮಸ್ಕರಿಸಿ ಹೋಗಲೆಂದು ಬಂದಿದ್ದೇನೆ. ಅಹಿತರಾದ ಪಾಂಡವರೊಂದಿಗೆ ಸಂಧಿಮಾಡಿಸಿಕೊಡಿ ಎಂದು ಬಂದಿಲ್ಲ, ಸಮರಭೂಮಿಯಲ್ಲಿ ನಾನು ಯಾವ ರಣತಂತ್ರ ಅನುಸರಿಸಲಿ ಎಂಬ ಸಲಹೆ ನೀಡಿ ಎಂದು ತನ್ನ ಛಲ ಪ್ರದರ್ಶಿಸುತ್ತಾನೆ ಎಂದರು.

ಶಾಲೆಯ ಮುಖ್ಯಶಿಕ್ಷಕ ಎಸ್.ಜಿ. ಮೇಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ನಾಡು ಪ್ರಾಚೀನ ಪರಂಪರೆ ಹೊಂದಿದ್ದು, ಹಿಂದಿನ ಕವಿಗಳು ಸಮಾಜದ ಹಿತಕ್ಕಾಗಿ, ಬದಲಾವಣೆಗಾಗಿ ಕಾವ್ಯಗಳನ್ನು ಬರೆದಿದ್ದಾರೆ. ಅವರ ಉದಾತ್ತ ಚಿಂತನೆಗಳು ಮನುಕುಲಕ್ಕೆ ಪ್ರೇರಣೆಯಾಗಿವೆ ಎಂದರು.

ಕಸಾಪ ಜಿಲ್ಲಾ ಕೋಶಾಧ್ಯಕ್ಷ ಡಾ.ಸಿ.ಎಂ. ಜೋಶಿ ಮಾತನಾಡಿದರು. ಕಸಾಪ ತಾಲೂಕು ಅಧ್ಯಕ್ಷ ಡಾ.ಎಚ್.ಎಸ್. ಘಂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಉಪನ್ಯಾಸ ನೀಡಿದ ಪಿ.ಜಿ. ಮೂರಬಂಡಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಕಸಾಪ ಗೌರವ ಕಾರ್ಯದರ್ಶಿ ಈರಣ್ಣ ಅಲದಿ, ಸಹ ಶಿಕ್ಷಕರಾದ ಎಸ್.ಎಸ್. ಕಾರಜೋಳ, ಆರ್.ಎಂ. ನೀಲುಗಲ್ಲ, ಎಂ.ಎಚ್. ಮುಲ್ಲಾ, ಎಸ್.ಸಿ. ಸುರಕೋಡ, ಎಸ್.ವಿ. ನಾಯಕ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net