ಛಲ ಇದ್ದರೆ ಸಾಧನೆ ಸಾಧ್ಯ

santosh ballure sanman
Published on

ಭಾಲ್ಕಿ: ಜೀವನದಲ್ಲಿ ಮಹತ್ತರವಾದದ್ದನ್ನು ಸಾಸಬೇಕು ಎಂಬ ಛಲವುಳ್ಳ ವಿದ್ಯಾರ್ಥಿಗಳು ಅಂದುಕೊಂಡಿದ್ದೆಲ್ಲವನ್ನೂ ಸಾಸಲು ಸಾಧ್ಯ ಎಂದು ಹಿರೇಮಠದ ಪೀಠಾಪತಿ ಶ್ರೀ ಗುರುಬಸವ ಪಟ್ಟದ್ದೇವರು ಹೇಳಿದರು.
ಶ್ರೀ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಸೈನ್ಯದ ವೈದ್ಯಕೀಯ ವಿಭಾಗದ ಕ್ಯಾಪ್ಟನ್ ಆಗಿ ಆಯ್ಕೆಯಾಗಿರುವ ಗುರುಕುಲದ ಹಳೆಯ ವಿದ್ಯಾರ್ಥಿ ಸಂತೋಷಕುಮಾರ ಬಲ್ಲೂರೆ ಅವರನ್ನು ಸನ್ಮಾನಿಸಿ ಮಾತನಾಡಿ, ಗುರುಕುಲದಲ್ಲಿ ಸಿಗುತ್ತಿರುವ ಗುಣಮಟ್ಟದ ಶಿಕ್ಷಣ ಸಾಮಾನ್ಯ ವಿದ್ಯಾರ್ಥಿಗಳಿಂದ ಅಸಾಮಾನ್ಯ ಸಾಧನೆ ಹೊರಹೊಮ್ಮುವಂತೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಸಂತೋಷ ಬಲ್ಲೂರೆ ಬಹಳ ಜಾಣ ವಿದ್ಯಾರ್ಥಿ. ಈತನ ಸಾಧನೆ ಇತರ ಯುವಕರಿಗೆ ಪ್ರೇರಣೆಯಾಗಲಿ ಎಂದು ಆಶಿಸಿದರು.
ಸಂತೋಷಕುಮಾರ ಬಲ್ಲೂರೆ ಮಾತನಾಡಿ, ನನ್ನ ಸಾಧನೆಗೆ ನಿರಂತರ ಓದು, ಗುರುಗಳ ಮಾರ್ಗದರ್ಶನವೇ ಕಾರಣ. ವಿದ್ಯಾರ್ಥಿಗಳು ಸಮಯವನ್ನು ಹಾಳು ಮಾಡದೆ ಅಧ್ಯಯನದಲ್ಲಿ ನಿರಂತರ ತೊಡಗಿದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.
ಆಡಳಿತಾಧಿಕಾರಿ ಮೋಹನರಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ, ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ, ವಿದ್ಯಾರ್ಥಿಗಳಾದ ಬಸವಪ್ರಸಾದ, ಆದಿತ್ಯ, ಆರ್ಯನ್, ಸಂಧ್ಯಾ, ಸಂಗನಬಸವ ಮಂಟೂರ ಇದ್ದರು.

ಜಮ್ಮು ಕಾಶ್ಮೀರದಲ್ಲಿ ಕರ್ತವ್ಯ
ಭಾಲ್ಕಿ ಪಟ್ಟಣದ ಗುರು ಕಾಲನಿ ನಿವಾಸಿಯಾದ ಸಂತೋಷಕುಮಾರ ಓಂಕಾರ ಬಲ್ಲೂರೆ 1ರಿಂದ ಎಸ್ಸೆಸ್ಸೆಲ್ಸಿವರೆಗೆ ಶ್ರೀ ಸತ್ಯಸಾಯಿ ಪಬ್ಲಿಕ್ ಸ್ಕೂಲ್ನಲ್ಲಿ ಓದಿದ್ದಾರೆ. ಶ್ರೀ ಚನ್ನಬಸವೇಶ್ವರ ಗುರುಕುಲದಲ್ಲಿ ಪಿಯುಸಿ ಮುಗಿಸಿ ಬಳ್ಳಾರಿಯ ಸರ್ಕಾರಿ ಕಾಲೇಜಿನಲ್ಲಿ ಬಿಡಿಎಸ್ (ದಂತ ವೈದ್ಯಕೀಯ) ಮಾಡಿದ್ದಾರೆ. ನೀಟ್ ಪಿಜಿಯಲ್ಲಿ 226 ರ್ಯಾಂಕ್ ಪಡೆದಿದ್ದು, ಭಾರತೀಯ ರಕ್ಷಣಾ ಇಲಾಖೆ ಇತ್ತೀಚೆಗೆ ನಡೆಸಿರುವ ನೇಮಕಾತಿ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 8ನೇ ರ್ಯಾಂಕ್ ಗಳಿಸಿದ್ದಾರೆ. ಸೆ.11ರಂದು ಜಮ್ಮು ಕಾಶ್ಮೀರದಲ್ಲಿ ಕರ್ತವ್ಯಕ್ಕೆ ಬಲ್ಲೂರೆ ಹಾಜರಾಗಲಿದ್ದಾರೆ.

ಗುರುಕುಲ ವಿದ್ಯಾರ್ಥಿ ಸಂತೋಷಕುಮಾರ ಅವರು ಭಾರತೀಯ ಸೈನ್ಯದ ವೈದ್ಯಕೀಯ ವಿಭಾಗದಲ್ಲಿ ಕ್ಯಾಪ್ಟನ್ ಆಗಿ ನೇಮಕಗೊಂಡಿರುವುದು ತುಂಬ ಸಂತಸ ತಂದಿದೆ. ನಮ್ಮ ವಿದ್ಯಾರ್ಥಿಗಳಲ್ಲಿ ಅಪಾರ ಪ್ರತಿಭೆ, ಜಾಣ್ಮೆ ಇದೆ. ಇನ್ನೂ ಸ್ವಲ್ಪ ಕಷ್ಟದೊಂದಿಗೆ ಇಷ್ಟ ಪಟ್ಟು ಓದಿದರೆ ನಗರ ಪ್ರದೇಶದ ಮಕ್ಕಳಿಗಿಂತ ಉತ್ತಮ ಸಾಧನೆ ಮಾಡಲಿದ್ದಾರೆ.| ಶ್ರೀ ಡಾ.ಬಸವಲಿಂಗ ಪಟ್ಟದ್ದೇವರುಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net