

ಚಿತ್ರದುರ್ಗ: ಭಾರತದಲ್ಲಿ ಸನಾತನ ಧರ್ಮ ಪುನರುಜ್ಜೀವನದ ಜತೆಗೆ ರಾಷ್ಟ್ರಭಕ್ತಿ ಮೂಡಲು ಛತ್ರಪತಿ ಶಿವಾಜಿ ಮಹಾರಾಜರು ಕಾರಣ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಬಣ್ಣಿಸಿದರು.
ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆಯಿಂದ ತರಾಸು ರಂಗಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಜಯಂತಿ ಉದ್ಘಾಟಿಸಿ ಮಾತನಾಡಿದರು.
ತಾಯಿ ಜೀಜಾಬಾಯಿ ಚಿಕ್ಕಂದಿನಲ್ಲಿಯೇ ಶಿವಾಜಿಗೆ ಉತ್ತಮ ಸಂಸ್ಕಾರ ನೀಡಿದ್ದರ ಫಲ ಛತ್ರಪತಿಯಾಗಿ ದಕ್ಷ, ಸಾಮರಸ್ಯದ ಆಡಳಿತ ನಡೆಸಲು ಸಾಧ್ಯವಾಯಿತು. ಇಂದಿನ ಪಾಲಕರು ಈ ಮಾರ್ಗದಲ್ಲಿ ಸಾಗಿದರೆ, ಮಕ್ಕಳ ಭವಿಷ್ಯ ಉಜ್ವಲವಾಗಲಿದೆ. ದೇಶಕ್ಕೂ ಉತ್ತಮ ಪ್ರಜೆಯಾಗಲಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಮಹನೀಯರು ಯಾವುದೇ ಭಾಷೆ, ಜಾತಿ, ರಾಜ್ಯಕ್ಕೆ ಸೀಮಿತವಲ್ಲ. ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿ, ಸಾಲ ಸೌಲಭ್ಯ ಕಲ್ಪಿಸಿದೆ. ಇದನ್ನು ಸಮುದಾಯದವರು ಸದುಪಯೋಗ ಪಡಿಸಿಕೊಂಡು ಆರ್ಥಿಕ ಬೆಳವಣಿಗೆ ಸಾಧಿಸಬೇಕು ಎಂದು ಸಲಹೆ ನೀಡಿದರು.
ಪ್ರಾಧ್ಯಾಪಕ ಡಾ.ಸಿ.ಗುರುಸ್ವಾಮಿ ಮಾತನಾಡಿ, ಶಿವಾಜಿ ಮಹಾರಾಜರು ಅಧರ್ಮ ಮಾರ್ಗ, ದೌರ್ಜನ್ಯ ಎಸಗುತ್ತಿದ್ದವರ ಮೇಲೆ ಹೋರಾಟ ನಡೆಸಿದ್ದಾರೆ ಹೊರತು ಮುಸ್ಲಿಂ ಧರ್ಮದ ವಿರುದ್ಧವಲ್ಲ. ತಾಯಿ, ಗುರುಗಳಾದ ದಾದಾಜಿ ಕೊಂಡದೇವ, ರಾಮದಾಸ ಅವರ ಪ್ರೋತ್ಸಾಹದ ಕಾರಣಕ್ಕೆ ಉತ್ತಮ ಆಡಳಿತ ನೀಡಿದರು ಎಂದು ತಿಳಿಸಿದರು.
ಶಿವಾಜಿ ಧಾರ್ಮಿಕ ಸಹಿಷ್ಣು. ಹೀಗಾಗಿ ಯಾವ ಧರ್ಮೀಯರೊಂದಿಗೂ ಅಗೌರವದಿಂದ ನಡೆದುಕೊಳ್ಳಲಿಲ್ಲ. ಅವರ ಸೈನಿಕರೂ ಇದಕ್ಕೆ ಹೊರತಾಗಿರಲಿಲ್ಲ. ಈ ಕುರಿತು ಆದಿಲ್‌ಶಾಹಿ ಆಸ್ಥಾನದಲ್ಲಿದ್ದ ಬರಹಗಾರರೇ ತಮ್ಮ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಔರಂಗಜೇಬನ ವಿರುದ್ಧ ಹೋರಾಡಿ ಬಲಿಷ್ಠ ಮರಾಠ ಸಾಮ್ರಾಜ್ಯ ಸ್ಥಾಪಿಸಿದರು. ಕೊನೆಗೆ ಆತನೇ ಉತ್ತಮ ಆಡಳಿತಗಾರ ಎಂದು ಒಪ್ಪಿಕೊಂಡಿದ್ದು ಇತಿಹಾಸವಾಗಿ ಉಳಿದಿದೆ ಎಂದು ಬಣ್ಣಿಸಿದರು.
ಸಹಾಯಕ ನಿರ್ದೇಶಕರಾದ ಎಸ್.ಕೆ.ಮಲ್ಲಿಕಾರ್ಜುನ್, ಹರೀಶ್, ನಗರಸಭೆ ಪೌರಾಯುಕ್ತೆ ಎಂ.ರೇಣುಕಾ, ಮರಾಠ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸುರೇಶ್‌ರಾವ್ ಜಾದವ್, ಕಾರ್ಯದರ್ಶಿ ಜೆ.ಗೋಪಾಲರಾವ್ ಜಾದವ್, ಜೀಜಾಮಾತಾ ಮಹಿಳಾ ಮಂಡಳಿ ಅಧ್ಯಕ್ಷೆ ಜಿ.ಉಷಾಬಾಯಿ, ಮುಖಂಡ ನಿತಿನ್ ಜಾದವ್, ಜಿಪಂ ಮಾಜಿ ಸದಸ್ಯ ಪಾಪಣ್ಣ, ರಂಗನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ, ಇತರರಿದ್ದರು.