ಛತ್ರಪತಿ ಶಿವಾಜಿ ಪ್ರತಿಮೆ ಕಿಚ್ಚು ; ಪಾಲಿಕೆ ನಿರ್ಣಯ ಹಿಂಪಡೆಯಲು ಆದೇಶಿಸಲು ಡಿಸಿಗೆ ಕರುನಾಡು ವಿಜಯಸೇನೆ ಆಗ್ರಹ

08Tmk_Shivaji_Pratime_Kicchu
Published on

ತುಮಕೂರು : ನಗರದ ಉದ್ಯಾನವನದಲ್ಲಿ ಮರಾಠ ಮಹಾರಾಜ ಛತ್ರಪತಿ ಶಿವಾಜಿ ಪ್ರತಿಮೆ ಸ್ಥಾಪಿಸುವ ವಿಷಯಕ್ಕೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆಯಲ್ಲಿ ತೆಗೆದುಕೊಂಡಿರುವ ಒಮ್ಮತದ ನಿರ್ಣಯ ಹಿಂಪಡೆಯುವಂತೆ ಕರುನಾಡ ವಿಜಯಸೇನೆ ಕಾರ್ಯಕರ್ತರು ಒತ್ತಾಯಿಸಿದರು.

ಬ್ರಿಟೀಷರ ವಿರುದ್ಧ ಹೋರಾಡಿದ ಕನ್ನಡ ನಾಡಿನ ದಿಟ್ಟ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಲಕ್ಷಾಂತರ ಮಕ್ಕಳಿಗೆ ವಿದ್ಯಾದಾನ, ಅನ್ನದಾನ ಮಾಡಿರುವ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಪ್ರತಿಮೆಯನ್ನು ಸ್ಥಾಪಿಸಲು ಜಿಲ್ಲಾಧಿಕಾರಿಗಳು ಆದೇಶಿಸಬೇಕೆಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಕರುನಾಡ ವಿಜಯಸೇನೆ ಕಾರ್ಯಕರ್ತರು ಆಗ್ರಹಿಸಿದರು.

ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಸಿ.ಪಿ.ಸುಧೀರ್ ಮಾತನಾಡಿ, ಬ್ರಿಟೀಷರ ವಿರುದ್ಧ ಹೋರಾಡಿದಂತಹ ಶಿವಾಜಿ ಮಹಾರಾಜರ ಬಗ್ಗೆ ನಮಗೆ ಅಪಾರ ಗೌರವವಿದೆ. ಆದರೆ, ನವೆಂಬರ್ 1ರ ಕನ್ನಡ ರಾಜ್ಯೋತ್ಸವ ದಿನದಂದು ಮರಾಠಿಗರು ಕರಾಳ ದಿನಾಚರಣೆ ಆಚರಿಸುತ್ತಾರೆ. ಭಾಷೆ, ಬಾಂಧವ್ಯಕ್ಕೆ ಅಡ್ಡಿಪಡಿಸುತ್ತಾರೆ. ಅವರೊಂದಿಗೆ ನಿರಂತರ ಹೋರಾಟ ಮಾಡಿಕೊಂಡು ಕನ್ನಡಿಗರು ಬಂದಿದ್ದಾರೆ. ಹೀಗಿರುವಾಗ ಶಿವಾಜಿ ಮಹಾರಾಜರ ಪ್ರತಿಮೆ ಯಾಕೆ ಸ್ಥಾಪನೆ ಮಾಡಬೇಕು, ನಮ್ಮ ರಾಜ್ಯದಲ್ಲಿ ಹೋರಾಟಗಾರರಿಲ್ಲವೇ ಎಂದು ಪ್ರಶ್ನಿಸಿದರು.

ಪಾಲಿಕೆಯಲ್ಲಿ ತೆಗೆದುಕೊಂಡಿರುವ ನಿರ್ಣಯವನ್ನು ಹಿಂಪಡೆಯಲು ಆದೇಶಿ, ಕನ್ನಡಿಗರ ಭಾವನೆಗಳಿಗೆ ಧಕ್ಕೆಯಾಗದಂತೆ ತಡೆಯುವಂತೆ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಲಾಯಿತು.

ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ಮರಾಠಿಗರು ದಬ್ಬಾಳಿಕೆ ಮಾಡುತ್ತಲೇ ಬಂದಿದ್ದಾರೆ. ಅಲ್ಲಿನ ಕನ್ನಡಿಗರನ್ನು ವಾಸ ಮಾಡಲು ಬಿಡುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ ಶಿವಾಜಿ ಪುತ್ಥಳಿಯನ್ನು ತುಮಕೂರಿನಲ್ಲಿ ಮಾಡುವ ಅವಶ್ಯಕತೆ ಇಲ್ಲ. ನಮ್ಮ ಜಿಲ್ಲೆಯ ಸ್ವಾಂತಂತ್ರ್ಯ ಹೋರಾಟಗಾರರ ಪುತ್ಥಳಿ ನಿರ್ಮಾಣ ಮಾಡಲಿ ಅದನ್ನು ಬಿಟ್ಟು ಶಿವಾಜಿ ಪುತ್ಥಳಿ ಮಾಡಿದರೆ ಉಗ್ರ ಹೋರಾಟ ಮಾಡಲಾಗುವುದು. ಬಿ.ಬಿ.ಮಹದೇವಪ್ಪ ಗೌರವಾಧ್ಯಕ್ಷ, ಕರುನಾಡು ವಿಜಯಸೇನೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net