ಚೌಳಹಿರಿಯೂರು ಕೆರೆ ಹದ್ದುಬಸ್ತು

kdr lake
ಚೌಳಹಿರಿಯೂರು ಗ್ರಾಮದ ಕೆರೆಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಏರಿಯನ್ನು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಜೆಸಿಬಿಯಿಂದ ತೆರವುಗೊಳಿಸಿದರು.
Published on

ಕಡೂರು: ಚೌಳಹಿರಿಯೂರು ಗ್ರಾಮದ ಕೆರೆಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಏರಿಯನ್ನು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಶನಿವಾರ ತೆರವುಗೊಳಿಸಿದರು.

102.33 ಎಕರೆ ವಿಸ್ತೀರ್ಣವುಳ್ಳ ಚೌಳಹಿರಿಯೂರು ಕೆರೆ ಸುಮಾರು 500 ಎಕರೆ ಜಮೀನಿಗೆ ನೀರುಣಿಸುತ್ತಿದ್ದು ಕುಕ್ಕಸಮುದ್ರ ಕೆರೆಯಿಂದ ನೀರು ಹಾಯವಳಿ ವ್ಯವಸ್ಥೆಯಿದೆ. ಸಣ್ಣ ನೀರಾವರಿ ಇಲಾಖೆಗೆ ಒಳಪಟ್ಟಿರುವ ಕೆರೆಯನ್ನು ಅತಿಕ್ರಮಿಸಿಕೊಂಡು ಕೆಲವರು ರಾತ್ರೋ ರಾತ್ರಿ ಏರಿ ನಿರ್ಮಿಸಿದ್ದರು. ಏರಿ ನಿರ್ಮಾಣಕ್ಕಾಗಿ ಸಂಬಂಧಿಸಿದ ಇಲಾಖೆಯಿಂದ ಯಾವುದೇ ಅನುಮತಿ ಪಡೆದಿಲ್ಲ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ನಂತರ ಅಂದಿನ ತಹಸೀಲ್ದಾರ್ ಕವಿರಾಜ್ ಸ್ಥಳಕ್ಕೆ ಭೇಟಿ ನೀಡಿ ಸರ್ವೇಯರ್ ನೇಮಕ ಮಾಡಿ ವಾಸ್ತವ ಸ್ಥಿತಿ ಅರಿತು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಸರ್ವೇ ಮುಗಿದ ನಂತರ ಚೌಳಹಿರಿಯೂರು ಕೆರೆಯ ಒಂದು ಕಡೆ ಒಂದು ಎಕರೆ ಹಾಗೂ ಮತ್ತೊಂದು ಕಡೆ ಐದು ಗುಂಟೆ ಜಮೀನು ಒತ್ತುವರಿಯಾಗಿದ್ದು ದೃಢಪಟ್ಟಿತ್ತು. ಶನಿವಾರ ಜೆಸಿಬಿಯನ್ನು ತಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಜಾಗ ಒತ್ತುವರಿ ಗುರುತಿಸಿ ಟ್ರೆಂಚ್ ಹೊಡೆಯುವ ಮೂಲಕ ಹದ್ದುಬಸ್ತು ಮಾಡಿದರು.

ಕೆರೆ ಒತ್ತುವರಿ ತೆರವಿಗೆ ಗ್ರಾಮಸ್ಥರು ಸಹಕರಿಸಿದರು. ಯಾವುದೇ ಪ್ರತಿರೋಧ ಎದುರಾಗಲಿಲ್ಲ. ಯಾವುದೇ ಕೆರೆ ಜಾಗ ಒತ್ತುವರಿಯಾಗಿರುವುದು ಕಂಡುಬಂದರೆ ಅದನ್ನು ತೆರವುಗೊಳಿಸಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆ ಎಇಇ ದಕ್ಷಿಣಾಮೂರ್ತಿ ಪ್ರತಿಕ್ರಿಯಿಸಿದರು. ಇಲಾಖೆಯ ಇಂಜಿನಿಯರ್ ಮಂಜುನಾಥ್, ಬೀರೂರು ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಕಾಂತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net