

ಕುಶಾಲನಗರ: ನಗರದ ರಥಬೀದಿಯಲ್ಲಿರುವ ಶ್ರೀ ಚೌಡೇಶ್ವರಿ ದೇವಸ್ಥಾನದ 35ನೇ ವರ್ಷದ ವಾರ್ಷಿಕ ಪೂಜೆ ಹಾಗೂ ದೇವಾಲಯದ ಗೋಪುರದ ಉದ್ಘಾಟನೆಯ ಗುರುವಾರ ನೆರವೇರಿತು.
ಮೂರು ದಿನಗಳು ನಡೆಯುವ ಪೂಜೋತ್ಸವದ ಅಂಗವಾಗಿ ಗುರುವಾರ ಗಣಪತಿ ಹೋಮ, ಕಲಾಹೋಮ ಬಳಿಕ ಕಾವೇರಿ ನದಿಯಿಂದ ಮೆರವಣಿಗೆಯೊಂದಿಗೆ ಕಳಸ ತಂದು ವಿವಿಧ ಪೂಜಾ ವಿಧಿಗಳ ಬಳಿಕ ಮೇಲಂತಸ್ತಿನ ಗೋಪುರ ಉದ್ಘಾಟಿಸಿ ನಂತರ ದೇವಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು. ಮಡಿಕೇರಿ ಕ್ಷೇತ್ರ ಶಾಸಕರು, ಕುಶಾಲನಗರ ಪುರಸಭೆ ಅಧ್ಯಕ್ಷ ಬಿ.ಜಯವರ್ಧನ್, ದೇವಾಂಗ ಸಮಾಜ ಬಾಂಧವರು ಪಾಲ್ಗೊಂಡಿದ್ದರು.
ಸಭಾ ಕಾರ್ಯಕ್ರಮ: ಗಾಯತ್ರಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ಶಾಸಕ, ನೇಕಾರರ ಮುಖಂಡ ಎಂ.ಡಿ.ಲಕ್ಷ್ಮೀನಾರಾಯಣ ಮಾತನಾಡಿ, ಸಮಾಜದ ಏಳಿಗೆಗಾಗಿ ಸರ್ಕಾರ ನೀಡುವ ಅನುದಾನವನ್ನು ಸದುಪಯೋಗಪಡಿಸಿಕೊಂಡು ಸಮುದಾಯದ ಅಭಿವೃದ್ಧಿ ಮಾಡುವಂತೆ ಸಲಹೆ ನೀಡಿದರು.
ನೇಕಾರಿಕೆ ಪಂಗಡಗಳಲ್ಲಿ ದೇವಾಂಗ ಸಮಾಜ ಪ್ರಮುಖವಾಗಿದ್ದು, ರಾಜ್ಯದಲ್ಲಿ ಅಂದಾಜು 60 ಲಕ್ಷ ಜನಸಂಖ್ಯೆ ಇದೆ. ಸರ್ಕಾರ ಸಮುದಾಯದ 1.53 ಲಕ್ಷ ಕುಟುಂಬಗಳಿಗೆ ಸಹಾಯಹಸ್ತ ನೀಡುವುದರೊಂದಿಗೆ 463 ದೇವಾಲಯಗಳಿಗೆ ಅನುದಾನ ಕಲ್ಪಿಸಿದೆ. ನೇಕಾರರ ಒಗ್ಗಟ್ಟು ಪ್ರದರ್ಶನ ಅಗತ್ಯವಾಗಿದ್ದು, ಸರ್ಕಾರದ ಸವಲತ್ತುಗಳನ್ನು ಪಡೆಯುವುದರಿಂದ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದರು.
ಸಂಘದ ಮಾಜಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಸಂಘದ ಅಭಿವೃದ್ಧಿಗೆ ಸಹಕರಿಸಿದ ಮಹನೀಯರಿಗೆ ಸನ್ಮಾನಿಸಿ, ಗೌರವಿಸಲಾಯಿತು. ಸಂಜೆ ವಿದ್ಯುತ್ ದೀಪಾಲಂಕೃತವಾದ ಭವ್ಯ ಮಂಟಪದಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು.
ಕುಶಾಲನಗರ ದೇವಾಂಗ ಸಂಘದ ಅಧ್ಯಕ್ಷ ಡಿ.ಟಿ ವಿಜಯೇಂದ್ರ, ಉದ್ಯಮಿ ಡಿ.ಎಸ್.ಜಗದೀಶ್, ಡಿ.ಎಸ್.ಕೋದಂಡರಾಮ್, ಡಿ.ಸಿ. ಜಗದೀಶ್, ಸಂಘದ ಉಪಾಧ್ಯಕ್ಷ ಡಿ.ಆರ್.ಸೋಮಶೇಖರ್, ಮಹಿಳಾ ಅಧ್ಯಕ್ಷೆ ಸುಲೋಚನಾ ರಂಗಪ್ಪ, ಕರ್ನಾಟಕ ರಾಜ್ಯ ನೇಕಾರರ ಒಕ್ಕೂಟದ ನಿರ್ದೇಶಕ ಮತ್ತು ಪುರಸಭೆ ಸದಸ್ಯ ಡಿ.ಕೆ ತಿಮ್ಮಪ್ಪ, ಒಕ್ಕೂಟದ ಜಿಲ್ಲಾಧ್ಯಕ್ಷ ಟಿ.ಕೆ.ಪಾಂಡುರಂಗ, ಮಡಿಕೇರಿ ದೇವಾಂಗ ಸಂಘದ ಅಧ್ಯಕ್ಷ ಗಜಾನನ, ಭಾರತಿ ರಮೇಶ್, ಕುಶಾಲನಗರ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ವಿ.ರಾಜೇಶ್, ಉಪಾಧ್ಯಕ್ಷ ಡಿ.ಕೆ.ಮಹೇಶ್, ಸಹಕಾರ್ಯದರ್ಶಿ ಡಿ.ವಿ.ಚಂದ್ರು, ಖಜಾಂಚಿ ಡಿ.ಆರ್.ಕೃಷ್ಣ ಕುಮಾರ್, ಪ್ರಚಾರ ಸಮಿತಿ ಪ್ರಮುಖ ಕೆ.ಕೆ.ನಾಗರಾಜಶೆಟ್ಟಿ ಮತ್ತಿತರರು ಇದ್ದರು.
ಮೆರವಣಿಗೆ: ಗುರುವಾರ ಸಂಜೆ ವಿದ್ಯುತ್ ಅಲಂಕೃತ ಮಂಟಪದಲ್ಲಿ ಚೌಡೇಶ್ವರಿ ಉತ್ಸವ ಮೂರ್ತಿಯ ಅದ್ದೂರಿ ಮೆರವಣಿಗೆ ನಡೆಸಿದರು. ವೀರಗಾಸೆ, ಮೈಸೂರಿನ ಬ್ಯಾಂಡ್‌ಸೆಟ್ ಸಾರ್ವಜನಿಕರನ್ನು ಆಕರ್ಷಿಸಿತ್ತು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ದಾರಿಯುದ್ದಕ್ಕೂ ವಿವಿಧ ರೀತಿಯ ಪಟಾಕಿ ಸಿಡಿಸಿ ಸಂಭ್ರಮಿಸಿದರು.