ಚೌಡಿಗೌರಿ, ದಿಡ್ಡಮ್ಮ ತೆಪ್ಪೋತ್ಸವ ಸಂಭ್ರಮ

25ark1
Published on

ಅರಕಲಗೂಡು: ತಾಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ಭಾನುವಾರ ಶ್ರೀಚೌಡಿಗೌರಿ ಮೂರ್ತಿ ವಿಸರ್ಜನಾ ಮಹೋತ್ಸವ ಅಂಗವಾಗಿ ದೊಡ್ಡಕೆರೆಯಲ್ಲಿ ತೆಪ್ಪೋತ್ಸವ ಸಂಭ್ರಮದಿಂದ ಜರುಗಿತು.

ಗ್ರಾಮದ ಇತಿಹಾಸ ಪ್ರಸಿದ್ಧ ಗೌರಮ್ಮ ದೇವಸ್ಥಾನದಲ್ಲಿ ಸಂಪ್ರದಾಯದಂತೆ ಗೌರಿ ಹಬ್ಬದಂದು ದೇವಸ್ಥಾನದಲ್ಲಿ ಕಡಲೇ ಕಾಳು, ಬೆಣ್ಣೆ ಮತ್ತು ಮಣ್ಣಿನ ಮಿಶ್ರಣದಿಂದ ತಯಾರಿಸಿದ ಚೌಡಿಗೌರಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ದೇವಿಗೆ ನಿತ್ಯ ಪೂಜೆ ಸಲ್ಲಿಸಲಾಗುತ್ತಿತ್ತು.

ದೇವಸ್ಥಾನದಲ್ಲಿ ಶನಿವಾರ ದೇವರಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಭಾನುವಾರ ಗೌರಮ್ಮ ತಾಯಿ ಮತ್ತು ದಿಡ್ಡಮ್ಮ ದೇವತೆ ಉತ್ಸವ ನಡೆಯಿತು. ಪಟಾಕಿ ಸಿಡಿಸಿ ಮಂಗಳವಾದ್ಯದೊಂದಿಗೆ ದೊಡ್ಡಕೆರೆಗೆ ಕೊಂಡೊಯ್ದು ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಪ್ರತ್ಯೇಕವಾಗಿ ಜೋಡಿ ತೆಪ್ಪದ ಮೇಲೆ ಚೌಡಿಗೌರಿ ಮತ್ತು ಗಿಡ್ಡಮ್ಮ ದೇವತೆ ಉತ್ಸವ ಮೂರ್ತಿಯನ್ನು ಕೂರಿಸಿ ತೆಪ್ಪೋತ್ಸವ ನಡೆಸಲಾಯಿತು. ಕೆರೆಯಂಗಳದಲ್ಲಿ ಪ್ರದಕ್ಷಿಣೆ ಹಾಕುತ್ತಿದ ತೆಪ್ಪೋತ್ಸವವನ್ನು ಕೆರೆಏರಿ ಮೇಲೆ ನಿಂತು ಭಕ್ತರು ಭಕ್ತಿಯಿಂದ ಕಣ್ತುಂಬಿಕೊಂಡರು. ನೆರೆದಿದ್ದ ಭಕ್ತರ ಜಯಘೋಷಗಳ ನಡುವೆ ತೆಪ್ಪೋತ್ಸವ ಬಳಿಕ ಕೆರೆಯಲ್ಲಿ ಶ್ರೀಚೌಡಿಗೌರಿ ಮೂರ್ತಿ ವಿಸರ್ಜಿಸಲಾಯಿತು.

ಕಾಳೇನಹಳ್ಳಿ ಸುತ್ತಲಿನ ಹಳ್ಳಿಗಳ ಜನರು ತೆಪ್ಪೋತ್ಸವವನ್ನು ವೀಕ್ಷಿಸಿದರು. ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net