

ಕೊಪ್ಪ: ಇತ್ತೀಚೆಗೆ ಎಷ್ಟೋ ಸರ್ಕಾರಿ ಶಾಲೆಗಳು ಯಾವ ಖಾಸಗಿ ಶಾಲೆಗಳಿಗೂ ಕಮ್ಮಿ ಇಲ್ಲದಂತೆ ಮೂಲ ಸೌಲಭ್ಯ ಪಡೆದುಕೊಳ್ಳುತ್ತಿವೆ. ಕೆಸವೆ ಗ್ರಾಪಂನ ಚೌಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೋಡದರೆ ಕೆಎಸ್ಆರ್ಟಿಸಿ ಬಸ್ ನಿಂತಂತೆ ಭಾಸವಾಗುತ್ತದೆ. ಇದಕ್ಕೆ ಕಾರಣ ಮುಖ್ಯ ಶಿಕ್ಷಕಿಯ ವಿಭಿನ್ನ ಚಿಂತನೆ. ಕೊಠಡಿಗಳಿಗೆ ಕೆಎಸ್ಆರ್ಟಿ ಬಸ್ನಂತೆ ಪೈಂಟಿಂಗ್ ಮಾಡಿಸಿ ಆಕರ್ಷಿತಗೊಳಿಸಿದ್ದಾರೆ.
ಮುಖ್ಯಶಿಕ್ಷಕಿ ಯಶೋದಾ ಅವರ ಶ್ರಮದಿಂದ ಶಾಲೆ ಕಟ್ಟಡಕ್ಕೆ ಹೊಸ ಕಳೆ ಬಂದಿದೆ. ಶಾಲೆ ಅಭಿವೃದ್ಧಿಗೆ ಗ್ರಾಪಂ 70 ಸಾವಿರ ಅನುದಾನದಲ್ಲಿ 20 ಸಾವಿರ ರೂ. ಬಳಸಿಕೊಂಡು ಬಸ್ ರೂಪದಲ್ಲಿ ಬಣ್ಣದ ಅಲಂಕಾರ ಮಾಡಲಾಗಿದೆ.
ಚೌಕಿ ಶಾಲೆಯಲ್ಲಿ ಎಂಟು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಕೊಪ್ಪದಿಂದ ಐದು ಕಿಮೀ ದೂರವಿದ್ದು, ಈ ಗ್ರಾಮದ ಮಕ್ಕಳನ್ನು ಪಾಲಕರು ಪಟ್ಟಣದಲ್ಲಿರುವ ಖಾಸಗಿ ಶಾಲೆಗೆ ಸೇರಿಸಿದ್ದಾರೆ. ಇದರಿಂದ ಈ ಶಾಲೆಯಲ್ಲಿ ಮಕ್ಕಳ ದಾಖಲಾತಿ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ. ಶಾಲೆಯೂ ಮುಚ್ಚುವ ಹಂತಕ್ಕೆ ತಲುಪಿದೆ. ಶಾಲೆ ಉಳಿಸಿಕೊಳ್ಳುವ ಸಲುವಾಗಿ ಮುಖ್ಯಶಿಕ್ಷಕಿ ಯಶೋದಾ ಅವರು ಶಾಲೆಗೆ ಆಕರ್ಷಕ ಪೈಂಟಿಂಗ್ ಮಾಡಿಸಿದ್ದಾರೆ. ಜತೆಗೆ ದಾನಿಗಳ ಸಹಕಾರ ಪಡೆದು ಮಕ್ಕಳಿಗೆ ಉಚಿತವಾಗಿ ಪಠ್ಯ ಸಾಮಗ್ರಿ ಒದಗಿಸಲು ಮುಂದಾಗಿದ್ದಾರೆ.
ಗಮನ ಸೆಳೆದ ಕಿರಣ್ ಆರ್ಟ್:ಪಟ್ಟಣದ ಮೇಲಿನಪೇಟೆ ಕಿರಣ್ ಅವರು ಶಾಲೆಗೆ 20 ಸಾವಿರ ರೂ. ವೆಚ್ಚದಲ್ಲಿ ಆಕರ್ಷಣೀಯವಾಗಿ, ಕೆಎಸ್ಆರ್ಟಿಸಿ ಬಸ್ನಂತೆ ಶಾಲೆ ಗೋಡೆಗೆ ಪೈಂಟಿಂಗ್ ಮಾಡಿದ್ದಾರೆ. ಇದಕ್ಕೆ ನಲಿಕಲಿ ಎಕ್ಸ್ಪ್ರೆಸ್ ಎಂದು ಹೆಸರಿಟ್ಟಿದ್ದಾರೆೆ. ಕೊಠಡಿ ಒಳಗೆ ಗಿಡಮರ, ಹಕ್ಕಿಗಳ ಚಿತ್ರ ಬರೆದು ಮಕ್ಕಳಲ್ಲಿ ಪರಿಸರ ಪ್ರೇಮ ಬೆಳೆಸುವ ಪ್ರಯತ್ನ ಮಾಡಿದ್ದಾರೆ. ಮಕ್ಕಳ ಕಲಿಕೆಗೆ ಉಪಯೋಗವಾಗುವಂತೆ ಹಣ್ಣು, ಹಂಪಲು ವಿವಿಧ ಸಂದೇಶಗಳುಳ್ಳ ಚಿತ್ರಗಳನ್ನು ಬಿಡಿಸಿದ್ದಾರೆ.
ಪಾಲಕರ ಸಹಕಾರ ಮುಖ್ಯ:ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚೌಕಿಯಲ್ಲಿ ಯಶೋದಾ ಒಬ್ಬರೇ ಶಿಕ್ಷಕಿ. ಗ್ರಾಮದ ಮಕ್ಕಳು ಕೊಪ್ಪದ ಖಾಸಗಿ ಶಾಲೆಗಳಿಗೆ ತೆರಳುತ್ತಾರೆ. ಆ ಮಕ್ಕಳನ್ನು ಸರ್ಕಾರಿ ಶಾಲೆಗೆ ಕರೆತರುವ ಉದ್ದೇಶದಿಂದ ಕಟ್ಟಡಕ್ಕೆ ಪೈಂಟಿಂಗ್ ಮಾಡಿಸಿದ್ದಾರೆ. ಕಳೆದ ವರ್ಷವೇ ಸರ್ಕಾರ ಈ ಶಾಲೆಯನ್ನು ಮುಚ್ಚಲು ಮುಂದಾಗಿತ್ತು. ಆಗ ಗ್ರಾಮಸ್ಥರನ್ನು ಸೇರಿಸಿ ಶಿಕ್ಷಣ ಇಲಾಖೆಗೆ ಅರ್ಜಿಗಳನ್ನು ಬರೆದು ಶಾಲೆ ಉಳಿಸಿಕೊಂಡಿದ್ದಾರೆ. ಈ ವರ್ಷವೂ ಅಂಥದ್ದೇ ಸ್ಥಿತಿ ಉದ್ಭವಿಸಬಹುದು ಎಂಬ ಕಾರಣಕ್ಕೆ ಪೈಂಟಿಂಗ್ ಮಾಡಿಸಲಾಗಿದೆ.
ಚೌಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉಳಿಸಿಕೊಳ್ಳಲು ಶಿಕ್ಷಕಿ ಕಳಕಳಿಯಂತೆ ಗ್ರಾಮಸ್ಥರ ಸಹಕಾರ ಕೂಡ ಮುಖ್ಯ. ಖಾಸಗಿ ಶಾಲೆಯಲ್ಲಿ ಸಿಗುವುದಕ್ಕಿಂತ ಹೆಚ್ಚಾಗಿ ಗುಣಮಟ್ಟದ ಶಿಕ್ಷಣ ಹಾಗೂ ಸವಲತ್ತು ಸರ್ಕಾರಿ ಶಾಲೆಗಳಲ್ಲಿ ಲಭಿಸುತ್ತದೆ. ಆಯಾ ಗ್ರಾಮದ ಮಕ್ಕಳನ್ನು ಅಲ್ಲಿನ ಶಾಲೆಗಳಿಗೆ ಸೇರಿಸಿದರೇ ಶಾಲೆಯೂ ಉಳಿಯುತ್ತದೆ.