ಚೈಲ್ಡ್ ರವಿ ಕೊಲೆ ಪ್ರಕರಣದ ನ್ವಾಲರು ಆರೋಪಿಗಳ ಬಂಧನ

ಚೈಲ್ಡ್ ರವಿ ಕೊಲೆ ಪ್ರಕರಣದ ನ್ವಾಲರು ಆರೋಪಿಗಳ ಬಂಧನ
Published on

ಹಾಸನ: ಇಡೀ ನಗರವನ್ನೇ ಬೆಚ್ಚಿ ಬೀಳಿಸಿದ ಚೈಲ್ಡ್ ರವಿ ಕೊಲೆ ಪ್ರಕರಣ ಸಂಬಂಧ ನಾಲ್ಕು ಜನ ಆರೋಪಿಗಳನ್ನು ಬಂಧಿಸುವಲ್ಲಿ ನಮ್ಮ ಪೊಲೀಸ್ ತಂಡ ಯಶಸ್ವಿಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ ತಿಳಿಸಿದರು.
ತಮ್ಮ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಪಿಗಳಾದ ಪ್ರೀತಂ ಅಲಿಯಾಸ್ ಗುಂಡ ಪ್ರೀತು (27), ಕೀರ್ತಿ ಅಲಿಯಾಸ್ ಕಿರಿಕ್ ಕೀರ್ತಿ (26), ರಂಗನಾಥ್ ಅಲಿಯಾಸ್ ರಂಗ ಚೇತು (26) ಹಾಗೂ ಅಮಿತ್ ಅಲಿಯಾಸ್ ಅಮ್ಮಿ (31), ಇವರನ್ನು ಗುರುವಾರ ರಾತ್ರಿ ಬಂಧಿಸಲಾಗಿದ್ದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಜೂನ್ 5ರ ಬುಧವಾರ ಬೆಳಗ್ಗೆ 7.45ರಿಂದ 8 ಗಂಟೆ ಸಮಯದಲ್ಲಿ ಹೇಮಾವತಿ ನಗರದಲ್ಲಿ ರವಿ ಕುಮಾರ್ ಅಲಿಯಾಸ್ ಚೈಲ್ಡ್ ರವಿ ಬೈಕಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಈ ನಾಲ್ವರು ಕಾರಿನಲ್ಲಿ ಬಂದು ಬೈಕಿಗೆ ಗುದ್ದಿಸಿ ಆತನ ಮೇಲೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಈ ನಾಲ್ವರು ಆರೋಪಿಗಳನ್ನು ನಗರದ ಹೊರವಲಯದಲ್ಲಿ ಬಂಧಿಸಲಾಗಿದೆ ಎಂದು ಹೇಳಿದರು.
ಚೈಲ್ಡ್ ರವಿ ಮತ್ತು ರಂಗೋಲಿ ಹಳ್ಳದ ನಿವಾಸಿ ಪ್ರೀತಂ ಇಬ್ಬರು ಸ್ನೇಹಿತರಾಗಿದ್ದರು. ಕೆಲ ದಿನಗಳಿಂದ ಇವರಿಬ್ಬರ ನಡುವೆ ವೈ ಮನಸು ಉಂಟಾದ ಕಾರಣ ಈ ಕೊಲೆ ನಡೆದಿರಬಹುದು ಅಥವಾ ಇನ್ಯಾವುದೋ ವಿಚಾರಕ್ಕೆ ಕೊಲೆ ನಡೆದಿರಬಹುದೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಕೊಲೆಯಾದ ನಂತರ ಮೃತ ಚೈಲ್ಡ್ ರವಿ ಪತ್ನಿ ಗೌತಮಿ ನೀಡಿದ ದೂರಿನ ಅನ್ವಯ ಪ್ರೀತಂ ಸೇರಿದಂತೆ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹೇಳಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಸ್‌ಪಿ ವೆಂಕಟೇಶ್ ನಾಯ್ಡು ಮತ್ತು ಡಿವೈಎಸ್ಪಿ ಮುರಳೀಧರ್ ಹಾಗೂ ಪೆನ್ಷನ್ ಮೊಹಲ್ಲಾ ಠಾಣೆ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಗುರುವಾರ ರಾತ್ರಿ 8 ಗಂಟೆ ಸಮಯದಲ್ಲಿ ಹಾಸನ ತಾಲೂಕಿನ ಕಸಬಾ ಹೋಬಳಿಯ ಗೇರೆಹಳ್ಳಿ ಮದ್ಯದ ಅಂಗಡಿ ಹತ್ತಿರ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು, ಡಿವೈಎಸ್ಪಿ ಪಿ.ಕೆ. ಮುರಳೀಧರ್ ಸೇರಿದಂತೆ ಇತರರು ಇದ್ದರು.

ಪ್ರೀತಂ ಮೇಲೆ 13 ಪ್ರಕರಣ
ಕೊಲೆ ಪ್ರಕರಣದ ಪ್ರಮುಖ ಆರೋಪಿ ಪ್ರೀತಂ ಮೇಲೆ ಈ ಹಿಂದೆ 13 ಪ್ರಕರಣಗಳು ದಾಖಲಾಗಿದ್ದು, 10 ಪ್ರಕರಣಗಳು ಖುಲಾಸೆಯಾಗಿವೆ. ಇನ್ನು ಮೂರು ಪ್ರಕರಣಗಳು ಬಾಕಿ ಉಳಿದಿವೆ. ಅಲ್ಲದೆ ಕಳೆದ ನಾಲ್ಕೈದು ತಿಂಗಳಿನ ಹಿಂದೆ ಈತ ಜೈಲಿನಿಂದ ಹೊರಬಂದಿದ್ದ. ನಂತರ ರವಿ ಜತೆಗೆ ಗಲಾಟೆ ಮಾಡಿಕೊಂಡಿದ್ದರು. ಈ ಕಾರಣಕ್ಕೆ ಕೊಲೆ ಮಾಡಿರಬಹುದು ಅಥವಾ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು. ವಿಚಾರಣೆ ನಂತರ ಕೊಲೆಗೆ ನಿಖರ ಕಾರಣ ತಿಳಿದುಬರಲಿದೆ.

ಜಿಲ್ಲೆಯಲ್ಲಿ ರೌಡಿಗಳ ಬಗ್ಗೆ ಕಟ್ಟೆಚ್ಚರ
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಯಾವುದೇ ರೀತಿ ದಕ್ಕೆ ಆಗದಂತೆ ರೌಡಿಗಳ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಈಗಾಗಲೇ ಕಳೆದ ಚುನಾವಣೆ ಹಿನ್ನಲೆಯಲ್ಲಿ 59 ಜನ ರೌಡಿಶೀಟರ್‌ಗಳನ್ನು ಗಡಿಪಾರು ಮಾಡಲಾಗಿತ್ತು. ಮತ್ತು ಎಂಟು ತಿಂಗಳಲ್ಲಿ ಐದು ಜನ ರೌಡಿಶೀಟರ್‌ಗಳನ್ನು ಗೂಂಡಾ ಕಾಯ್ದೆಯಲ್ಲಿ ಬಂಧಿಸಲಾಗಿದೆ. ಕಳೆದ ಆರು ತಿಂಗಳಲ್ಲಿ ಒಂಬತ್ತು ಜನ ರೌಡಿಗಳಿಗೆ ಜೀವಾವಧಿ ಶಿಕ್ಷೆಯನ್ನು ಕೊಡಿಸಲಾಗಿದೆ. ಮುಂದಿನ ದಿನಗಳಲ್ಲೂ ರೌಡಿಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗುವುದು ಎಂದು ಎಸ್‌ಪಿ ಮೊಹಮ್ಮದ್ ಸುಜಿತಾ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net