ಚೆಸ್ ಪ್ರೋತ್ಸಾಹಿಸಲು ದೇಶಾದ್ಯಂತ ಸೈಕಲ್ ಜಾಥಾ

Cycle
Published on

ಚಿತ್ರದುರ್ಗ: ಚೆಸ್ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಆಟಗಾರರನ್ನು ಬೆಂಬಲಿಸಬೇಕೆಂಬ ಉದ್ದೇಶದಿಂದ ಬೆಳಗಾವಿ ಜಿಲ್ಲೆ ಬೆಳ್ಳಂಗಿಯ ರಾಹುಲ್ ಭೀಮರಾವ್ ಕಾಂಬ್ಳಿ ದೇಶಾದ್ಯಂತ ಸೈಕಲ್ ಜಾಥಾ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ನ. 23ರಂದು ಬೆಳಗಾವಿಯಿಂದ ಏಕಾಂಗಿಯಾಗಿ ಸೈಕಲ್ ಏರಿ ಹೊರಟ ಅವರು ಶನಿವಾರ ರಾತ್ರಿ ಚಿತ್ರದುರ್ಗ ಪ್ರವೇಶಿಸಿದರು. ಭಾನುವಾರ ಒನಕೆ ಓಬವ್ವ ಪ್ರತಿಮೆ ಮುಂಭಾಗದಿಂದ ಶಿರಾದತ್ತ ಪಯಣ ಮುಂದುವರಿಸಿದರು.

ದಿನಕ್ಕೆ 75 ಕಿ.ಮೀ ಕ್ರಮಿಸುತ್ತಿದ್ದಾರೆ. ಶಿರಾ, ತುಮಕೂರು, ಬೆಂಗಳೂರು, ಕೆಜಿಎಫ್, ವೆಲ್ಲೂರು, ಕಾಂಚಿಪುರಂ ಮೂಲಕ ಒಂದು ತಿಂಗಳೊಳಗೆ ಚೆನ್ನೈ ತಲುಪಿ ಚೆಸ್ ಮಾಂತ್ರಿಕರಾದ ವಿಶ್ವನಾಥ್ ಆನಂದ್, ಡಿ.ಗುಕೇಶ್, ಪ್ರಜ್ಞಾನಂದ ಅವರನ್ನು ಭೇಟಿಯಾಗಿ ಗ್ರಾಮೀಣ ಮಟ್ಟದಲ್ಲಿ ಚೆಸ್‌ಗೆ ಹೆಚ್ಚಿನ ಒತ್ತು ನೀಡುವಂತೆ ಮನವಿ ಮಾಡಲಿದ್ದಾರೆ.

ಚೆಸ್ ಬುದ್ಧಿಶಕ್ತಿ ಚುರುಕಾಗಿಸಿ ಏಕಾಗ್ರತೆ ಹೆಚ್ಚಿಸುತ್ತ್ತದೆ. ಯುವಸಮೂಹ ಹೆಚ್ಚು ಸಮಯ ಮೊಬೈಲ್‌ಗೆ ಮೀಸಲಿಡುವ ಬದಲು ಚದುರಂಗದ ಆಟದ ಕಡೆ ಆಸಕ್ತಿ ವಹಿಸಬೇಕು. ಸರ್ಕಾರ ಇದನ್ನು ಮುನ್ನೆಲೆಗೆ ತರಬೇಕು ಎಂದು ಕೋರಿದ್ದಾರೆ.

ರಕ್ಷಣೆಗಾಗಿ ಹೆಲ್ಮೇಟ್, ಕಣ್ಣಿಗೆ ಗ್ಲಾಸ್, ಬೆಚ್ಚನೆಯ ಉಡುಪು ಧರಿಸಿ ಹೊರಟಿರುವ ಕಾಂಬ್ಳಿ ದಾರಿ ಮಧ್ಯದಲ್ಲಿ ಎಲ್ಲಾದರೂ ಸೈಕಲ್ ಪಂಕ್ಚರ್ ಆದರೂ ಅದನ್ನು ಸರಿಪಡಿಸಿಕೊಳ್ಳಲು ಅಗತ್ಯ ಸಲಕರಣೆ ಇಟ್ಟುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net