

ಹೆಂಡತಿಯನ್ನು ಹೆರಿಗೆಗೆ ಕರೆದುಕೊಂಡು ಬಂದಿದ್ದ ವ್ಯಕ್ತಿ ನಗರದ ಚೆಲುವಾಂಬ ಆಸ್ಪತ್ರೆ ಆವರಣದಲ್ಲಿ ಮಲಗಿದ್ದಾಗಲೇ ಸಾವನ್ನಪ್ಪಿದ್ದು, ಹೃದಯಾಘಾತದ ಶಂಕೆ ವ್ಯಕ್ತವಾಗಿದೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು ಚೌಡಳ್ಳಿ ಗ್ರಾಮದ ನಾಗೇಶ್ (47) ಮೃತ ವ್ಯಕ್ತಿ. ನಾಗೇಶ್ ರಾತ್ರಿ 10.30ರ ಸುಮಾರಿಗೆ ಆಸ್ಪತ್ರೆ ಮುಂದೆ ಮಲಗಿದ್ದರು. ಬೆಳಗ್ಗೆ 7 ಗಂಟೆ ಸುಮಾರಿಗೆ ನೋಡಿದಾಗ ಮೃತಪಟ್ಟಿದ್ದಾರೆ. ಕೊರೆಯುವ ಚಳಿ ತಡೆಯಲಾರದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದೆ.
ನಾಗೇಶ್ ಹೆರಿಗೆಗೆ ಅಂತ ತನ್ನ ಪತ್ನಿಯನ್ನು ಕಳೆದ ಶುಕ್ರವಾರ ಚಲುವಾಂಬ ಆಸ್ಪತ್ರೆಗೆ ದಾಖಲಿಸಿದ್ದರು. ಅಂದೇ ಪತ್ನಿಗೆ ಹೆರಿಗೆಯಾಗಿದ್ದು, ಗಂಡು ಮಗು ಜನಿಸಿತ್ತು. ಆರೋಗ್ಯ ಸಮಸ್ಯೆ ಕಾರಣ ಮೂರು ದಿನಗಳಿಂದಲೂ ಮಗುವನ್ನು ಐಸಿಯುವಿನಲ್ಲಿ ಇಡಲಾಗಿತ್ತು. ಹೀಗಾಗಿ ನಾಗೇಶ್ ತನ್ನ ಮಗುವಿನ ಮುಖವನ್ನು ಸರಿಯಾಗಿ ನೋಡಲಾಗಿರಲಿಲ್ಲ ಎಂದು ತಿಳಿದು ಬಂದಿದೆ.
ಪತ್ನಿಯ ಆರೈಕೆಗಾಗಿ ನಾಗೇಶ್ ಆಸ್ಪತ್ರೆಯಲ್ಲೇ ತಂಗಿದ್ದರು. ನಾಗೇಶ್ ಭಾನುವಾರ ರಾತ್ರಿ ಸುಮಾರು 10.30ರ ವೇಳೆ ಆಸ್ಪತ್ರೆ ಮುಂಭಾಗದ ಆವರಣದಲ್ಲಿ ಮಲಗಿದ್ದು, ಬೆಳಗ್ಗೆ ಮೃತಪಟ್ಟಿದ್ದಾರೆ.
ನಾಗೇಶ್‌ಗೆ ಸ್ವಲ್ಪ ಕುಡಿಯುವ ಚಟ ಇತ್ತು ಏನಾದರೂ ಹೆಚ್ಚು ಕುಡಿದು ಮಲಗಿದ್ದಲ್ಲೇ ಸಾವಾಗಿರಬಹುದೇ ಎಂಬುದು ಗೊತ್ತಿಲ್ಲ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಕೆ.ಆರ್. ಆಸ್ಪತ್ರೆಯ ಶವಾಗಾರದಲ್ಲಿ ಸೋಮವಾರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮೃತ ದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.