ಚೆನ್ನಯ್ಯ ಉದ್ಯಾನದಲ್ಲಿ ಅಭದ್ರತೆ ಐದಾರು ತಿಂಗಳು ಕಳೆದರೂ ಪೂರ್ಣಗೊಳ್ಳದ ಕಾಮಗಾರಿ

9CBP2a
Published on

ಚಿಕ್ಕಬಳ್ಳಾಪುರ : ಕಾಂಪೌಂಡ್ ನಿರ್ಮಾಣದ ಅರ್ಧಂಬರ್ಧ ಕಾಮಗಾರಿಯಿಂದಾಗಿ ಜಿಲ್ಲಾ ಕೇಂದ್ರದ ಹೃದಯಭಾಗದಲ್ಲಿರುವ ಚೆನ್ನಯ್ಯ ಪಾರ್ಕಿಗೆ ರಕ್ಷಣೆ ಇಲ್ಲದಂತಾಗಿದೆ.

ನಗರದ ತೋಟಗಾರಿಕಾ ಸಹಾಯಕ ನಿರ್ದೇಶಕರ ಕಚೇರಿ ಮುಂಭಾಗದ ರಸ್ತೆಗೆ ಹೊಂದಿಕೊಂಡಿರುವ ಉದ್ಯಾನದ ಹಳೇ ಕಾಂಪೌಂಡ್ ತೆರವಿನ ಬಳಿಕ ಮರು ನಿರ್ಮಾಣದ ಕೆಲಸಕ್ಕೆ ಚಾಲನೆ ನೀಡಿ, ಐದಾರು ತಿಂಗಳೇ ಕಳೆದಿದೆ. ಆದರೆ, ಇದುವರೆಗೂ ಗುತ್ತಿಗೆದಾರರಿಗೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಮಂಜೂರಾತಿ ನೀಡಿದ ಅಧಿಕಾರಿಗಳೂ ಸುಮ್ಮನಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ಮುಮ್ತಾಜ್ ಅಲಿಖಾನ್ ಮುತುವರ್ಜಿಯಿಂದ ಚೆನ್ನಯ್ಯ ಪಾರ್ಕಿಗೆ ಹೊಸ ಸ್ವರೂಪ ನೀಡಲಾಯಿತು.

ಸುತ್ತಲೂ ಅಲಂಕಾರಿಕ ಗಿಡಗಳು, ಕೂರಲು ವಿವಿಧ ಆಸನ ವ್ಯವಸ್ಥೆ, ನೀರಿನ ಕಾರಂಜಿ ಸೇರಿ ವಿವಿಧ ಸೌಕರ್ಯಗಳಿಂದ ಉದ್ಯಾನ ಜನರನ್ನು ಸೆಳೆಯುತ್ತಿತ್ತು. ಇನ್ನು ಜಿಲ್ಲಾ ಗ್ರಂಥಾಲಯ, ರಾಜ್ಯ ರಸ್ತೆ ಸಾರಿಗೆ ಮತ್ತು ಖಾಸಗಿ ಬಸ್ ನಿಲ್ದಾಣ, ನ್ಯಾಯಾಲಯ, ಉಪ ವಿಭಾಗಾಧಿಕಾರಿಗಳ ಕಚೇರಿ ಸಮೀಪದಲ್ಲಿಯೇ ಇದ್ದು ಕೆಲಸ ಕಾರ್ಯಗಳ ನಡುವೆ ಅನೇಕರು ಇಲ್ಲಿ ಕೆಲ ಕಾಲ ಕುಳಿತು ವಿರಮಿಸುತ್ತಾರೆ. ಹಲವರಿಗೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ವಾಕಿಂಗ್ ಮಾಡಲು ನೆಚ್ಚಿನ ತಾಣ. ಆದರೆ, ಬರುಬರುತ್ತ ಉದ್ಯಾನವು ಅಧಿಕಾರಿಗಳ ನಿರ್ಲಕ್ಷೃದಿಂದ ಸೊರಗುತ್ತಿದೆ. ಈಗ ನೀರಿನ ಕಾರಂಜಿ ಇಲ್ಲ. ಬಹುತೇಕ ಗಿಡಗಳು ಒಣಗಿದ್ದು ಇದೀಗ ಕಾಂಪೌಂಡ್ ಸಮಸ್ಯೆ ಕಾಡುತ್ತಿದೆ.

ಅನವಶ್ಯಕ ಕಾಮಗಾರಿ ಆರೋಪ : ಸಾಮಾನ್ಯ ಉದ್ಯಾನಗಳ ಮಾದರಿಯಲ್ಲಿ ಮೊದಲು ಇಲ್ಲಿ ಬಣ್ಣ ಬಳಿದ ಕಂಬಿಯ ತಡೆಗೋಡೆ ನಿರ್ಮಿಸಲಾಗಿತ್ತು. ಇದೀಗ ಇದನ್ನು ತೆರವುಗೊಳಿಸಲಾಗಿದೆ. ಚರಂಡಿ ಮಾದರಿಯಲ್ಲಿ ಪಾಯ ಅಗೆದು ಬಿಡಲಾಗಿದೆ. ಆದರೆ, ಇದು ಅನವಶ್ಯಕ ಎಂಬುದು ವಾಯು ವಿಹಾರಿಗಳ ಆರೋಪ. ಸದಾ ವಾಹನ ಮತ್ತು ಜನಸಂಚಾರ ದಟ್ಟಣೆ ಹೊಂದಿರುವ ತೋಟಗಾರಿಕಾ ಸಹಾಯಕರ ನಿರ್ದೇಶಕರ ಕಚೇರಿ ಮುಂಭಾಗದ ರಸ್ತೆ ಮೊದಲೇ ಕಿರಿದು. ಇದರ ನಡುವೆ ರಸ್ತೆಯನ್ನು ಆಕ್ರಮಿಸಿಕೊಂಡು ಕಾಂಪೌಂಡ್ ನಿರ್ಮಿಸುತ್ತಿದ್ದು ಇದರಿಂದ ಓಡಾಟಕ್ಕೆ ತೊಂದರೆಯಾಗಲಿದೆ. ಇದು ಸಂಚಾರಿ ಠಾಣೆ ಪೊಲೀಸರು ಮತ್ತು ನಗರಸಭೆ ಅಧಿಕಾರಿಗಳ ಕಿತ್ತಾಟಕ್ಕೆ ಕಾರಣವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ರಕ್ಷಣೆ ಇಲ್ಲದೆ ಸಮಸ್ಯೆ : ಕಾಂಪೌಂಡ್ ತೆರವಿನಿಂದ ಮೇಕೆ, ಹಸುಗಳು ಒಳನುಗ್ಗಿ, ಗಿಡಗಳನ್ನು ತಿಂದು ಹಾಕುತ್ತಿವೆ. ಉದ್ಯಾನ ನಾಯಿಗಳಿಗೂ ಆಶ್ರಯ ತಾಣವಾಗಿ ಪರಿವರ್ತನೆಯಾಗಿದೆ. ಇಲ್ಲಿ ರಕ್ಷಣೆ ಇಲ್ಲದಂತಾಗಿದೆ ಎಂದು ವಾಯು ವಿಹಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಚೆನ್ನಯ್ಯ ಉದ್ಯಾನದ ಕಾಂಪೌಂಡ್ ಸಮಸ್ಯೆ ಅರಿವಿಗೆ ಬಂದಿದೆ. ಕೂಡಲೇ ಕಾಮಗಾರಿ ಪ್ರಾರಂಭಿಸಲು ಗುತ್ತಿಗೆದಾರರಿಗೆ ಸೂಚಿಸಲಾಗುವುದು.

ಲೋಹಿತ್, ಪೌರಾಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net