ಚೆನ್ನಕಟ್ಟೆ ಒಡೆದು ನೀರು ಪೋಲು

27 CRP 02
Published on

ಚನ್ನರಾಯಪಟ್ಟಣ: ತಾಲೂಕಿನಾದ್ಯಂತ ಶುಕ್ರವಾರ ರಾತ್ರಿ ವ್ಯಾಪಕವಾಗಿ ಮಳೆ ಸುರಿದಿದ್ದು, ನುಗ್ಗೇಹಳ್ಳಿ-ಹುಲಿಕೆರೆ ಮಾರ್ಗಮಧ್ಯೆ ಇರುವ ಚೆನ್ನಕಟ್ಟೆ ಕೆರೆಯ ಏರಿ ಒಡೆದು ನೀರು ಪೋಲಾಗಿ ಹರಿಯುತ್ತಿದೆ.

ಶುಕ್ರವಾರ ಬೆಳಗ್ಗೆಯಿಂದಲೇ ತಾಲೂಕಿನ ವಿವಿಧೆಡೆ ಜಿಡಿಮಳೆ ಪ್ರಾರಂಭಗೊಂಡಿದ್ದು, ಮಧ್ಯಾಹ್ನದ ನಂತರ ನುಗ್ಗೇಹಳ್ಳಿ, ಬಾಗೂರು ಹಾಗೂ ಹಿರೀಸಾವೆ ಹೋಬಳಿ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಮಳೆ ಸುರಿಯಿತು. ರಾತ್ರಿಯೂ ಮುಂದುವರಿಯಿತು. ಇದರಿಂದ ಚೆನ್ನಕಟ್ಟೆ ತುಂಬಿ ಹರಿದಿದ್ದು ನೀರಿನ ಪ್ರಮಾಣ ಹೆಚ್ಚಿದ ಪರಿಣಾಮ ಏರಿಯು ಒಡೆದಿದೆ. ಕಳೆದ ವರ್ಷ ಈ ಕೆರೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಏರಿಯ ಒಂದು ಭಾಗ ಒಡೆದು ನೀರು ನುಗ್ಗಿದ ಪರಿಣಾಮ ಕಾಮಗಾರಿ ಪ್ರಗತಿಯಲ್ಲಿದ್ದ ನುಗ್ಗೇಹಳ್ಳಿ-ಹುಲಿಕೆರೆ ರಸ್ತೆಯ ಒಂದು ಭಾಗ ಉದ್ದಕ್ಕೂ ಕೊಚ್ಚಿ ಹೋಗಿತ್ತು.

ತಕ್ಷಣ ಜೆಸಿಬಿ ಯಂತ್ರದ ಮೂಲಕ 2 ಅಡಿ ಅಳತೆಯ ಸಿಮೆಂಟ್ ಪೈಪ್ ಅಳವಡಿಸಿ ನೀರನ್ನು ನಿಯಂತ್ರಿಸುವ ಮೂಲಕ ಅಂದು ಹೆಚ್ಚಿನ ಅಪಾಯವನ್ನು ತಪ್ಪಿಸಲಾಗಿತ್ತು. ಆದರೆ ಈ ಬಾರಿ ಅದಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಕೆರೆಗೆ ನೀರು ಹರಿದ ಪರಿಣಾಮ ಅಳವಡಿಸಿದ್ದ ಪೈಪ್ ಭಾಗದಲ್ಲಿಯೇ ಏರಿ ಒಡೆದಿದೆ. ಇದರಿಂದ ಹೊರಹರಿಯುತ್ತಿರುವ ನೀರು ಕೃಷಿ ಜಮೀನಿಗೆ ನುಗ್ಗಿ ಜಲಾವೃತಗೊಂಡಿದೆ.

ಮೈದುಂಬಿ ಹರಿದ ಕೆರೆಗಳು: ಕಳೆದ ಎರಡು ತಿಂಗಳ ಹಿಂದೆ ಸುರಿದ ವ್ಯಾಪಕ ಮಳೆಗೆ ಹಿರೀಸಾವೆ ಗ್ರಾಮದ ದೊಡ್ಡಕೆರೆ, ಬಾಳಗಂಚಿ, ಜಂಬೂರು, ಮತಿಘಟ್ಟ ಸೇರಿದಂತೆ ತಾಲೂಕು ವ್ಯಾಪ್ತಿಯ ಬಹುತೇಕ ಕೆರೆ-ಕಟ್ಟೆಗಳು ಮೈದುಂಬಿ ಹರಿದಿದ್ದವು. ಕಳೆದ ವಾರದಿಂದ ಸುರಿಯುತ್ತಿರುವ ಮಳೆಗೆ ಮತ್ತೊಮ್ಮೆ ಅಪಾಯ ಮಟ್ಟದಲ್ಲಿ ಮೈದುಂಬಿ ಹರಿಯುತಿದ್ದು, ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಹಳ್ಳ-ಕೊಳ್ಳಗಳಲ್ಲಿ ನೀರು ತುಂಬಿ ಪಕ್ಕದ ತೋಟ ಹಾಗೂ ಕೃಷಿ ಜಮೀನುಗಳಿಗೆ ನುಗ್ಗಿದೆ.

ಧರೆಗುರುಳಿದ ತೆಂಗಿನ ಮರಗಳು: ಕಳೆದ ಮೂರ‌್ನಾಲ್ಕು ತಿಂಗಳಿಂದ ನಿರೀಕ್ಷೆ ಮೀರಿ ಮಳೆ ಸುರಿದಿದ್ದು, ತೆಂಗಿನ ತೋಟಗಳು ಜಲಾವೃತಗೊಂಡಿದ್ದವು. ಇದರಿಂದ ತೇವಾಂಶ ಹೆಚ್ಚಾಗಿದ್ದು, ವಾರದಿಂದ ಬೀಸುತ್ತಿರುವ ಮಳೆ ಗಾಳಿಗೆ ತೆಂಗಿನ ಮರಗಳು ಬುಡಸಮೇತ ಧರೆಗುರುಳುತ್ತಿವೆ. ಮೂಕಿಕೆರೆ ಗ್ರಾಮದಲ್ಲಿ 15, ಚಿಕ್ಕೇನಹಳ್ಳಿ-5, ಎಂ.ಕೆ.ಹೊಸೂರು-3, ದಿಡಗ-5, ನುಗ್ಗೇಹಳ್ಳಿ ವ್ಯಾಪ್ತಿ-25, ಹಿರೀಸಾವೆ-6 ಹಾಗೂ ವಿವಿಧೆಡೆ ನೂರಾರು ತೆಂಗಿನ ಮರಗಳು ನೆಲಕ್ಕುರುಳಿವೆ.

ತುಂಬುವ ಹಂತದಲ್ಲಿ ಕೆರೆಗಳು: ಕಳೆದ ಮೂರು ತಿಂಗಳಿಂದ ವ್ಯಾಪಕವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಬಹುತೇಕ ಕೆರೆಗಳು ಮೈದುಂಬಿ ಹರಿಯುತ್ತಿವೆ. ಕಳೆದ 25 ವರ್ಷಗಳಿಂದ ನೀರಿಲ್ಲದೆ ಬಣಗುಡುತಿದ್ದ ಗಡಿಭಾಗದ ದಿಡಗ, ನರಿಹಳ್ಳಿ, ಮೆಳ್ಳಹಳ್ಳಿ, ನಾಗನಹಳ್ಳಿ ಸೇರಿದಂತೆ ಸಾಕಷ್ಟು ಕೆರೆಗಳು ತುಂಬುವ ಹಂತದಲ್ಲಿದ್ದು, ಮುಂದಿನ ಮೂರ‌್ನಾಲ್ಕು ದಿನಗಳಲ್ಲಿ ಕೋಡಿ ಮೂಲಕ ನೀರು ಹೊರ ಹರಿಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net