

ನೆಲಮಂಗಲ: ಕರೊನಾ ಸೋಂಕು ತಡೆಗಟ್ಟಲು ತಾಲೂಕು ಆಡಳಿತ ರಾ.ಹೆ.48ರ ಜಾಸ್ ಟೋಲ್‌ನಲ್ಲಿ ನಿರ್ಮಿಸಿರುವ ಚೆಕ್‌ಪೋಸ್ಟ್‌ನಲ್ಲಿ ಪರೀಕ್ಷೆ ಮಾಡುವ ಸಿಬ್ಬಂದಿ ಇಲ್ಲದೆ ಭಣಗುಡುತ್ತಿದೆ.
ಕರೊನಾ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಹೊರ ಜಿಲ್ಲೆ ಮತ್ತು ವಿವಿಧ ರಾಜ್ಯಗಳಿಂದ ರಾಜ್ಯ ರಾಜಧಾನಿಗೆ ಬರುವ ವಾಹನಗಳು ಹಾಗೂ ಬೆಂಗಳೂರಿನಿಂದ ಹೊರ ಜಿಲ್ಲೆಗೆ ತೆರಳುವ ವಾಹನಗಳು ಮತ್ತು ಪ್ರಯಾಣಿಕರನ್ನು ತಪಾಸಣೆ ಮಾಡಲು ಜಾಸ್ ಟೋಲ್‌ನಲ್ಲಿ ಏ.27ರಿಂದ ಚೆಕ್‌ಪೋಸ್ಟ್ ವ್ಯವಸ್ಥೆಗೊಳಿಸಿದೆ.
ಪ್ರತಿನಿತ್ಯ ಕಂದಾಯ, ಆರೋಗ್ಯ, ಪೊಲೀಸ್ ಮತ್ತು ಶಿಕ್ಷಣ ಇಲಾಖೆ ಸೇರಿ ವಿವಿಧ ಇಲಾಖೆಗಳ ಸಿಬ್ಬಂದಿ 3 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ, ಸರ್ಕಾರ ಸೋಮವಾರದಿಂದ ಲಾಕ್‌ಡೌನ್ ನಿಯಮ ಸಡಿಲಿಸಿರುವ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆಯಿಂದ ಈ ಚೆಕ್‌ಪೋಸ್ಟ್‌ನಲ್ಲಿ ಯಾವೊಬ್ಬ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ.
ಪರೀಕ್ಷೆ ಇಲ್ಲದೆ ಓಡಾಡುವ ಜನ: ತಾಲೂಕಿನ (ತುಮಕೂರು ಬೆಂಗಳೂರು ಮಾರ್ಗದ ರಾ.ಹೆ.-4) ಗಡಿ ಹಳೆನಿಜಗಲ್, (ಬೆಂಗಳೂರು ಮಂಗಳೂರು ಮಾರ್ಗದ ರಾ.ಹೆದ್ದಾರಿ 4) ಯಂಟಗಾನಹಳ್ಳಿಯ ದೇವಿಹಳ್ಳಿ ಟೋಲ್, ನಗರಸಭೆ ವ್ಯಾಪ್ತಿಯ (ಬೆಂಗಳೂರು ತುಮಕೂರು ಮಾರ್ಗದ ರಾ.ಹೆ.48) ಜಾಸ್‌ಟೋಲ್‌ನಲ್ಲಿ ನಿರ್ಮಿಸಲಾಗಿರುವ ಈ ಚೆಕ್‌ಪೋಸ್ಟ್‌ಗಳಲ್ಲಿ ಕರೊನಾ ಪರೀಕ್ಷೆ ಮಾಡಿ, ನೆಗೆಟಿವ್ ವರದಿ ಇದ್ದವರಿಗೆ ಮಾತ್ರವೇ ಬೆಂಗಳೂರು ಪ್ರವೇಶಿಸಲು ಮತ್ತು ಬೆಂಗಳೂರಿನಿಂದ ನಿರ್ಗಮಿಸಲು ಅವಕಾಶ ನೀಡಲಾಗುತ್ತಿತ್ತು. ಆದರೆ, ಈಗ ಜನರು ಯಾವುದೇ ಪರೀಕ್ಷೆ ಇಲ್ಲದೆ ಓಡಾಡುತ್ತಿರುವುದರಿಂದ, ಸೋಂಕು ಹೆಚ್ಚಳವಾಗುವ ಭೀತಿ ಮೂಡಿದೆ.
ಚೆಕ್‌ಪೋಸ್ಟ್‌ನಲ್ಲಿ ಜನರ ತಪಾಸಣೆಗೆ ಸಿಬ್ಬಂದಿ ಹಾಜರಾಗದಿರುವುದು ಬೇಸರದ ಸಂಗತಿ. ಚೆಕ್‌ಪೋಸ್ಟ್ ಹಾಜರಾತಿ ಪುಸ್ತಕವನ್ನು ಜಿಲ್ಲಾಧಿಕಾರಿ ಅವರಿಗೆ ನೀಡಲಾಗುವುದು. ಅವರು ಈ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳುವರು. ಕೆ.ಮಂಜುನಾಥ್, ತಹಸೀಲ್ದಾರ್