ಚೆಕ್‌ಡ್ಯಾಂನಿಂದ ನೀರು ಸೋರಿಕೆ

04-GPT-3
Published on

ಗುಂಡ್ಲುಪೇಟೆ: ತಾಲೂಕಿನ ಸ್ಕಂದಗಿರಿ ಪಾರ್ವತಿ ಬೆಟ್ಟದಲ್ಲಿ ಮಳೆನೀರು ಸಂಗ್ರಹಿಸಲು ನಿರ್ಮಿಸಿರುವ ಚೆಕ್‌ಡ್ಯಾಂ ಬಳಿ ಸೋರಿಕೆಯಾಗುತ್ತಿರುವ ನೀರು ತಡೆಗಟ್ಟಲು ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.


ಬಂಡೀಪುರ ಹುಲಿ ಯೋಜನೆಯ ಬಫರ್ ವಲಯದ ಸೆಕ್ಷನ್ 4ಕ್ಕೆ ಸೇರಿದ ಗುಡ್ಡಗಳಲ್ಲಿ ಮಳೆಗಾಲದಲ್ಲಿ ದೊಡ್ಡ ಪ್ರಮಾಣದ ಹರಿದುಹೋಗುವ ನೀರು ಸಂಗ್ರಹಿಸಲು ಮಲೆನಾಡು ಅಭಿವೃದ್ಧಿ ಯೋಜನೆಯಿಂದ 23 ಲಕ್ಷ ರೂ. ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಿಸಲಾಗಿದೆ. ಕಳೆದ ವರ್ಷ ಆರಂಭಿಸಿದ ಕಾಮಗಾರಿಯನ್ನು ಸಕಾಲದಲ್ಲಿ ಪೂರ್ಣಗೊಳಿಸಲಾಗಿದೆ. ಸದ್ಯ ಮಳೆ ಬೀಳುತ್ತಿರುವುದರಿಂದ ಚೆಕ್ ಡ್ಯಾಂನಲ್ಲಿ ಅರ್ಧದಷ್ಟು ನೀರು ಸಂಗ್ರಹವಾಗಿದೆ. ಆದರೆ ಚೆಕ್ ಡ್ಯಾಂ ನಿರ್ಮಾಣ ಸಂದರ್ಭದಲ್ಲಿ ಎರಡೂ ಕಡೆಗಳಲ್ಲಿ ತಡೆಗೋಡೆ ನಿರ್ಮಿಸಲು ಮುಂದಾಗದ ಪರಿಣಾಮ ಸಡಿಲವಾದ ಮಣ್ಣಿನ ಏರಿಯ ನಡುವಿನ ಕಿಂಡಿಗಳಲ್ಲಿ ನೀರು ಸೋರಿಕೆಯಾಗುತ್ತಿದೆ.


ಇದರಿಂದ ನೀರು ಸಂಗ್ರಹ ಕಡಿಮೆಯಾಗುವ ಜತೆಗೆ ಇದೇ ರೀತಿ ಮುಂದುವರಿದರೆ ಮಣ್ಣು ಕೊಚ್ಚಿಹೋಗಿ ನೀರು ಪೋಲಾಗುವ ಭೀತಿಯುಂಟಾಗಿದೆ. ಆದ್ದರಿಂದ ಕೂಡಲೇ ಸಂಬಂಧಪಟ್ಟವರು ನೀರಿನ ಸೋರಿಕೆ ತಡೆಗಟ್ಟಿ ತಡೆಗೋಡೆಗಳನ್ನು ನಿರ್ಮಿಸಲು ಕ್ರಮಕೈಗೊಳ್ಳಬೇಕು ಎಂದು ಕಂದೇಗಾಲ ಗ್ರಾಮದ ಗುರುಮಲ್ಲಪ್ಪ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net