ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟೆಚ್ಚರ ಬಿಗಿ!

6
Published on

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ವಿಧಾನಸಭೆ ಚುನಾವಣೆ ಘೋಷಣೆಯ ಬೆನ್ನಲ್ಲೇ ಜಿಲ್ಲೆಯ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ದಿನದ 24 ಗಂಟೆಯೂ ತಪಾಸಣಾ ಕಾರ್ಯ ಸಕ್ರಿಯಗೊಳಿಸಲಾಗಿದ್ದು, ಚುನಾವಣಾ ಅಕ್ರಮದ ಮೇಲೆ ಹದ್ದಿನ ಕಣ್ಣು ಇಡಲಾಗಿದೆ.

ಜಿಲ್ಲಾ ವ್ಯಾಪ್ತಿಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ನೀತಿ ಸಂಹಿತೆ ಪರಿಣಾಮಕಾರಿಯಾಗಿ ಜಾರಿಗೆ ತರಲು ಜಿಲ್ಲಾಡಳಿತ ಮುಂದಾಗಿದೆ. ಚುನಾವಣಾ ಅಕ್ರಮದ ರಹದಾರಿಗೆ ಚೆಕ್‌ಪೋಸ್ಟ್‌ಗಳಲ್ಲೇ ಕಡಿವಾಣ ಹಾಕಲು ಕ್ರಮ ತೆಗೆದುಕೊಂಡಿದೆ. ಪ್ರತಿಯೊಂದು ವಾಹನವನ್ನೂ ತಪಾಸಣೆಗೆ ಒಳಪಡಿಸಲಾಗುತ್ತಿದೆ.

51 ಚೆಕ್‌ಪೋಸ್ಟ್ ಸ್ಥಾಪನೆ:
ಚುನಾವಣೆ ಸಮಯದಲ್ಲಿ ಹಣದ ಬಲ ತಡೆಯುವುದು ದೊಡ್ಡ ಸವಾಲು ಎಂದಿರುವ ಕೇಂದ್ರ ಚುನಾವಣಾ ಆಯೋಗ, ಮತದಾರರಿಗೆ ಹಣ ಮತ್ತಿತರ ಆಮಿಷ ನೀಡುವುದನ್ನು ತಡೆಗಟ್ಟಲು ಎಲ್ಲ ಕ್ರಮ ತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲಿ 10, ಗ್ರಾಮಾಂತರ ಪದೇಶದಲ್ಲಿ 41 ಸೇರಿದಂತೆ ಒಟ್ಟು 51 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ನಿಗಾ ವಹಿಸಲಾಗಿದೆ. ನೆರೆಯ ರಾಜ್ಯಗಳಾದ ತಮಿಳುನಾಡು, ಕೇರಳ ಸುತ್ತಲಿನ ಜಿಲ್ಲೆಗಳಾದ ಚಾಮರಾಜನಗರ, ಕೊಡಗು, ಮಂಡ್ಯ, ಹಾಸನದಿಂದ ಬರುವ ಎಲ್ಲ ವಾಹನಗಳ ಮೇಲೆ ಕಣ್ಗಾವಲು ಇಡಲಾಗಿದೆ.


ಚೆಕ್‌ಪೋಸ್ಟ್‌ಗಳ ಮೂಲಕ ವಾಹನಗಳ ಚಲನವಲನ ಪರಿಶೀಲನೆ ಮಾಡಲಾಗುತ್ತಿದೆ. ಅಕ್ರಮ ತಡೆಗೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ಮೈಸೂರು ನಗರ ಹಾಗೂ ಜಿಲ್ಲಾ ವ್ಯಾಪ್ತಿಯೊಳಗೆ ತಪಾಸಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಮೈಸೂರಿನಲ್ಲೂ ನಿಗಾ:
ಮೈಸೂರು ನಗರ ಪೊಲೀಸ್ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಕಾರ್ಯಾಚರಣೆ ಬಿರುಸುಗೊಂಡಿದೆ. ನಗರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳಲ್ಲಿರುವ ಚೆಕ್‌ಪೋಸ್ಟ್‌ಗಳಲ್ಲಿ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಮೈಸೂರು-ಬೆಂಗಳೂರು ರಸ್ತೆಯ ಸಿದ್ದಲಿಂಗಪುರದ ಬಳಿ, ಬೋಗಾದಿ ರಸ್ತೆ, ಹುಣಸೂರು ರಸ್ತೆ, ಮೈಸೂರು-ಬನ್ನೂರು ರಸ್ತೆಯ ಭುಗತಗಳ್ಳಿ, ತಿ.ನರಸೀಪುರ ರಸ್ತೆಯ ಚಿಕ್ಕಳ್ಳಿ, ಎಚ್.ಡಿ.ಕೋಟೆ ರಸ್ತೆಯಲ್ಲಿರುವ ಚೆಕ್‌ಪೋಸ್ಟ್‌ನಲ್ಲಿ ಚುನಾವಣಾ ತಪಾಸಣಾ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದೆ. ಚುನಾವಣಾ ಕರ್ತವ್ಯಕ್ಕೆ ಕೆಲವು ಪ್ರೊಬೇಷನರಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ಆಯಾ ಠಾಣಾ ವ್ಯಾಪ್ತಿಯ ಸಿಬ್ಬಂದಿ ನಿಯೋಜಿಸಲಾಗಿದೆ.

ಅಂತರ ರಾಜ್ಯ ಗಡಿಯಲ್ಲೂ ಕಣ್ಗಾವಲು:
ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 41 ಚೆಕ್‌ಪೋಸ್ಟ್ ನಿರ್ಮಿಸಲಾಗಿದೆ. ಕೇರಳ ಗಡಿ ಬಾವಲಿ ಬಳಿ ಅಂತಾರಾಜ್ಯ ಚೆಕ್‌ಪೋಸ್ಟ್ ಅನ್ನು ಮತ್ತಷ್ಟು ಸಕ್ರಿಯಗೊಳಿಸಲಾಗಿದೆ. ಅಂತರ ಜಿಲ್ಲೆಗಳ ಸಂಪರ್ಕ ಮಾರ್ಗಗಳಲ್ಲಿ 17, ಜಿಲ್ಲೆಯ ಒಳಗಡೆ 23 ಚೆಕ್‌ಪೋಸ್ಟ್ ತೆರೆಯಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಕ್ರಮ ಜಾರಿಗೊಳಿಸಲಾಗುತ್ತದೆ.
ಅಂತರ ರಾಜ್ಯ ಹಾಗೂ ನೆರೆ ಜಿಲ್ಲೆಗಳಿಂದ ಮೈಸೂರು ಜಿಲ್ಲೆಯನ್ನು ಪ್ರವೇಶಿಸುವ ವಾಹನಗಳ ಮೇಲೆ ನಿಗಾ ವಹಿಸಲಾಗಿದೆ. ಎಚ್.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ, ಕೆ.ಆರ್.ನಗರ, ತಿ.ನರಸೀಪುರ, ನಂಜನಗೂಡು, ಸಾಲಿಗ್ರಾಮ ತಾಲೂಕು ಸೇರಿದಂತೆ ವಿವಿಧೆಡೆ ಚೆಕ್‌ಪೋಸ್ಟ್‌ಗಳನ್ನು ತೆರೆದು ಕ್ರಿಯಾಶೀಲಗೊಳಿಸಲಾಗಿದೆ. ದಿನದ 24 ಗಂಟೆಯೂ ಸಿಬ್ಬಂದಿ ತಪಾಸಣಾ ಕಾರ್ಯದಲ್ಲಿ ಸಕ್ರಿಯವಾಗಿದ್ದಾರೆ.

ವಿಡಿಯೋ ಚಿತ್ರೀಕರಣ:
ಪ್ರತಿಯೊಂದು ವಾಹನ ತಪಾಸಣೆಯ ವೇಳೆ ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ. ಸಿಬ್ಬಂದಿ 3 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಕ್ರಮ ವಹಿಸಲಾಗಿದ್ದು, ಹಗಲಿರುಳು ತಪಾಸಣಾ ಕಾರ್ಯ ಕೈಗೊಳ್ಳಲಾಗಿದೆ.

ಮದ್ಯ, ಹಣ ಸಾಗಣೆಗೆ ಕಡಿವಾಣ:

ಚುನಾವಣೆ ವೇಳೆ ಮತದಾರರಿಗೆ ಹಂಚಲು ಕೊಂಡೊಯ್ಯುವ ವಿವಿಧ ವಸ್ತುಗಳು, ಮದ್ಯ, ಹಣ ಸಾಗಣೆ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಇದರಿಂದ ದಾಖಲೆ ಇಲ್ಲದೆ ದೊಡ್ಡ ಪ್ರಮಾಣದಲ್ಲಿ ಯಾವುದೇ ವಸ್ತುಗಳ ಸಾಗಣೆಗೆ ಕಡಿವಾಣ ಬೀಳಲಿದೆ. ಅನುಮಾನಾಸ್ಪದ ವಾಹನಗಳನ್ನು ತೀವ್ರ ತಪಾಸಣೆ ನಡೆಸಲಾಗುತ್ತದೆ. ಸರಕು ಸಾಗಣೆ ವಾಹನಗಳನ್ನೂ ಸೂಕ್ಷ್ಮವಾಗಿ ತಪಾಸಣೆಗೆ ಒಳಪಡಿಸಲಾಗುತ್ತಿದೆ.

ದಾಖಲೆಯಿಲ್ಲದೆ 50 ಸಾವಿರ ರೂ.ಗಳಿಗಿಂತ ಹೆಚ್ಚು ಹಣ ತೆಗೆದುಕೊಂಡು ಹೋಗುತ್ತಿದ್ದರೆ ವಶಕ್ಕೆ ಪಡೆಯಲಾಗುವುದು. ತನಿಖೆ ನಡೆಸಿ ಕ್ರಮ ವಹಿಸಲಾಗುವುದು. ಡಾ.ಕೆ.ವಿ.ರಾಜೇಂದ್ರ, ಜಿಲ್ಲಾಧಿಕಾರಿ

ನಗರದಲ್ಲಿ ನಿರಂತರವಾಗಿ 10 ಚೆಕ್‌ಪೋಸ್ಟ್ ಕಾರ್ಯನಿರ್ವಹಿಸುತ್ತಿವೆ. ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿದೆ. ಈವರೆಗೆ 26 ಲಕ್ಷ ರೂ. ನಗದು, 25 ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಬಿ.ರಮೇಶ್, ನಗರ ಪೊಲೀಸ್ ಆಯುಕ್ತ

ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆದು ನೆರೆ ರಾಜ್ಯಗಳಿಂದ ಬರುವ ವಾಹನಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ. ಮತದಾರರಿಗೆ ಆಸೆ, ಆಮಿಷವೊಡ್ಡಲು ಯಾವುದೇ ವಸ್ತುಗಳ ಸಾಗಣೆ ಮಾಡುವವರನ್ನು ಪತ್ತೆ ಹಚ್ಚಲು ತಪಾಸಣೆಗೆ ಆದ್ಯತೆ ನೀಡಲಾಗಿದೆ. ಕಳೆದ 3 ತಿಂಗಳಲ್ಲಿ 45 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ.ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net