ಚೆಂಡು ಹೂವು ಕೇಳೋರೇ ಇಲ್ಲ

21
Published on

ಸಲು ರಸ್ತೆಗೆ ಸುರಿದ ರೈತರು,ದರ ಕುಸಿತದಿಂದ ಕೃಷಿಕರು ಕಂಗಾಲು

ಬಂಗಾರಪೇಟೆ: ಮಾರುಕಟ್ಟೆಯಲ್ಲಿ ಬೇಡಿಕೆ ಮತ್ತು ಬೆಲೆ ಇಲ್ಲದೆ ಮಾರಾಟವಾಗದ ಚೆಂಡು ಹೂವನ್ನು ಬೆಳೆಗಾರರು ರಸ್ತೆ ಬದಿ ಸುರಿದು ಆಕ್ರೋಶ ಹೊರಹಾಕಿದ್ದಾರೆ. ತಾಲೂಕಿನ ಬಹುತೇಕ ರೈತರು ಚೆಂಡು ಹೂವು ಬೆಳೆದಿದ್ದಾರೆ. ಆದರೆ, ಬೇಡಿಕೆಯೇ ಇಲ್ಲದ ಕಾರಣ ನಷ್ಟ ಎದುರಿಸುವಂತಾಗಿದೆ.

ನೆರ್ನಹಳ್ಳಿ ರೈತ ನಾರಾಯಣಪ್ಪ 50 ಸಾವಿರ ರೂ. ಖರ್ಚು ಮಾಡಿ 1 ಎಕರೆಯಲ್ಲಿ ಚೆಂಡು ಹೂವು ಬೆಳೆದಿದ್ದರು. ಆದರೆ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದ್ದು, ಬುಧವಾರ ಪ್ರತಿ ಕೆಜಿಗೆ 10 ರೂ. ಬೆಲೆಗೆ ಮಾರಾಟವಾಗುತ್ತಿತ್ತು. ನಾರಾಯಣಪ್ಪ ಅವರು ಹೂವು ಕಿತ್ತು ಮಾರುಕಟ್ಟೆಗೆ ಸಾಗಿಸಿದ್ದು, ಬೇಡಿಕೆ ಇರದ ಕಾರಣ ಹೂವು ಮಾರಾಟವಾಗಲಿಲ್ಲ. ಇದರಿಂದ ಬೇಸರಗೊಂಡ ರೈತ ಹೂವನ್ನು ಮನೆಗೆ ವಾಪಸ್​ ತೆಗೆದುಕೊಂಡು ಹೋಗದೆ ಕೋಲಾರ&ಬಂಗಾರಪೇಟೆ ಮಾರ್ಗದ ರಸ್ತೆಯ ಬದಿ ಸುರಿದು ಹೋಗಿದ್ದಾರೆ. ಸಾಲುಸಾಲು ಹಬ್ಬಗಳು ಮುಗಿದು, ಕಾರ್ತಿಕ ಮಾಸದ ಪೂಜೆ ಪುನಸ್ಕಾರಗಳು ನಡೆಯುತ್ತಿರುವ ಸಮಯದಲ್ಲೂ ಹೂವಿನ ಬೆಲೆ ಕುಸಿತ ಕಂಡಿರುವುದು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ಕಾರ್ತಿಕ ಮಾಸದಲ್ಲಿ ದೇವಾಲಯಗಳಲ್ಲಿ ವಿಶೇಷ ಪೂಜೆಗಳಲ್ಲದೇ ಮದುವೆ, ಶುಭಸಮಾರಂಭಗಳಂತಹ ಶುಭಕಾರ್ಯಗಳೂ ಹೆಚ್ಚಿನ ಪ್ರಮಾಣದಲ್ಲಿ ನಡೆಯುವ ಕಾರಣ ಹೂವಿನಿಂದ ನಾಲ್ಕು ಕಾಸು ಸಂಪಾದನೆ ಮಾಡಬಹುದು ಎಂಬ ಆಸೆ ಸದ್ಯ ಕಮರಿದಂತಾಗಿದೆ.

ಸಾಲಸೋಲ ಮಾಡಿ ಚೆಂಡು ಹೂವು ಬೆಳೆದಿದ್ದೇನೆ. ಉತ್ತಮ ಇಳುವರಿ ಸಹ ಬಂದಿದೆ. ಕೋಲಾರದ ವ್ಯಾಪಾರಿ 10 ರೂ.ಗೆ ಹೂವನ್ನು ಖರೀದಿಸುವುದಾಗಿ ಹೇಳಿದ್ದರು. ಆದರೆ ಮಾರುಕಟ್ಟೆಯಲ್ಲಿ ಕೇಳುವವರೇ ಇಲ್ಲದೆ ಹೂವು ಮಾರಾಟವಾಗಲಿಲ್ಲ. ಇದರಿಂದ ರಸ್ತೆ ಬದಿ ಸುರಿದರೆ ಯಾರಾದರೂ ತೆಗೆದುಕೊಂಡು ಹೋಗುತ್ತ್ತಾರೆ ಎಂದು ಎರಡು ಕಡೆ ಹೂವು ಸುರಿದಿದ್ದೇನೆ. ಹೂವು ಬೆಳೆಗಾರರ ನೆರವಿಗೆ ಸರ್ಕಾರ ಧಾವಿಸಲಿ.| ನಾರಾಯಣಪ್ಪ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net