ಚುರುಕುಗೊಂಡ ಮುಂಗಾರು,ಶಹರದ ರಸ್ತೆಗಳಲ್ಲಿ ತುಂಬಿದ ನೀರು

Published on

ಕಾರವಾರ: ಜಿಲ್ಲೆಯಲ್ಲಿ ಮುಂಗಾರು ಬಿರುಸುಗೊಂಡಿದೆ. ಬಿರು ಬಿಸಿಲಿನಿಂದ ಕಾದ ಕಾವಲಿಯಂತಾಗಿದ್ದ ಇಳೆ ವರ್ಷಧಾರೆಯ ಸಿಂಚನದಿಂದ ತಂಪಾಗಿದೆ. ಮೊದಲ ಮಳೆಗೆ ಕೆಲವೆಡೆ ರಸ್ತೆ, ಚರಂಡಿಗಳು ತುಂಬಿ ಅವಾಂತರ ಸೃಷ್ಟಿಯಾಗಿದೆ. ಕಾರವಾರದ ಗ್ರೀನ್‌ ಸ್ಟ್ರೀಟ್‌ನಲ್ಲಿ ಶುಕ್ರರವಾರ ಬೆಳಗ್ಗೆ ಮರ ಬಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು.

ಅಂಕೋಲಾದಲ್ಲಿ, ಭಟ್ಕಳದಲ್ಲಿ ರಸ್ತೆಗಳಲ್ಲಿ ನೀರು ತುಂಬಿತ್ತು. ಅಂಕೋಲಾದ ಅಂಗನವಾಡಿಯೊಂದರ ಒಳಗೆ ನೀರು ನುಗ್ಗಿ ಹಾನಿಯಾಯಿತು. ಗೋಕರ್ಣದಲ್ಲಿ ನಾಲೆಯ ನೀರು ಪ್ರಸಿದ್ಧ ಮಹಾಬಲೇಶ್ವರ ಮಂದಿರದ ಒಳಗೆ ನುಗ್ಗಿತು. ಆತ್ಮಲಿಂಗ ಜಲಾವೃತವಾಯಿತು. ಕೆಲ ಹೊತ್ತಿನ ಕಾರ್ಯಾಚರಣೆಯ ಬಳಿಕ ನೀರು ಹರಿದು ಹೋಗಲು ವ್ಯವಸ್ಥೆ ಮಾಡಿಕೊಡಲಾಯಿತು.

ಮಳೆಯ ಪ್ರಮಾಣ:

ಜಿಲ್ಲೆಯ ಹೊನ್ನಾವರ, ಗೋಕರ್ಣ ಅಂಕೋಲಾದಲ್ಲಿ ದಲ್ಲಿ ಭಾರಿ ಮಳೆಯಾಗಿದ್ದು, ಉಳಿದೆಡೆ ಆಗಾದ ಸಣ್ಣದಾಗಿ ಮಳೆ ಸುರಿಯುತ್ತಿದೆ. ಶುಕ್ರವಾರ ಬೆಳಗಿನ ವರದಿಯಂತೆ ಹೊನ್ನಾವರದ ಮಂಕಿಯಲ್ಲಿ 77.4 ಮಿಮೀ ಮಳೆಯಾಗಿದೆ. ಯಲ್ಲಾಪುರದ ಕಿರವತ್ತಿ-27, ಕಾರವಾರ-23.6, ಮುಂಡಗೋಡ-11.2, ಶಿರಾಲಿ-12.8, ಸಿದ್ದಾಪುರ -7.4, ಯಲ್ಲಾಪುರ-4.2, ಕದ್ರಾ- 6.5, ಹೊನ್ನಾವರ-20.3, ಗೋಕರ್ಣ-40.3, ಗೇರುಸೊಪ್ಪ-18.6, ಕ್ಯಾಸಲ್‌ರಾಕ್-13.2 ಮಿಮೀ ಮಳೆಯಾಗಿದೆ.

ಮುನ್ಸೂಚನೆ:

ಮುಂದಿನ ಐದು ದಿನ ಅರಬ್ಬಿ ಸಮುದ್ರದಲ್ಲಿ ಸಣ್ಣ ಬಿರುಗಾಳಿ ಏಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಮುನ್ಸೂಚನೆ ನೀಡಿದೆ. ತೆಲಂಗಾಣ ಸಮೀಪ ಅರಬ್ಬಿ ಸಮುದ್ರದಲ್ಲಿ ಹುಟ್ಟುವ ಗಾಳಿ ಮಹಾರಾಷ್ಟçದತ್ತ ಸಂಚರಿಸಲಿದೆ. ಜೂನ್ 8 ರವರೆಗೆ ಗಾಲಿಯು ಪ್ರತಿ ಗಂಟೆಗೆ 45 ರಿಂದ 55 ಕಿಮೀ ವೇಗದಲ್ಲಿ ಸಂಚರಿಸಲಿದೆ. ಜೂನ್ 9 ರಿಂದ 11 ರವರೆಗೆ ಗಾಳಿಯ ವೇಗವು ಪ್ರತಿ ಗಂಟೆಗೆ 65 ಕಿಮೀವರೆಗೂ ತಲುಪಬಹುದು ಎಂದು ಐಎಂಡಿ ವರದಿ ನೀಡಿದೆ.
ಜೂನ್ 8 ರಿಂದ 10 ರವರೆಗೆ ಗುಡುಗು, ಸಿಡಿಲಿನ ಜತೆಗೆ ಜಿಲ್ಲೆಯ ವಿವಿಧೆಡೆ 150 ಮಿಮೀಗೂ ಅಽಕ ಮಳೆಯಾಗುವ ಮುನ್ಸೂಚನೆ ಇದೆ. ಜಿಲ್ಲೆಯಲ್ಲಿ ಜೂನ್10 ರವರೆಗೆ ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಮೀನುಗಾರರ ಸಮುದ್ರಕ್ಕೆ ಇಳಿಯಬಾರದು ಎಂದು ಮುನ್ಸೂಚನೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net