ಚುರುಕಾಗಬೇಕಿದೆ ಸಾಹಿತ್ಯ ಚಟುವಟಿಕೆ

31-gdg-7
Published on

ಗದಗ: ಏಳು ಕೋಟಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಆಶೋತ್ತರಗಳನ್ನು ಎತ್ತಿ ಹಿಡಿಯುವ, ಕನ್ನಡ ನಾಡು ನುಡಿಗಾಗಿ ತಮ್ಮ ಸಮಯವನ್ನು ಮೀಸಲಿರಿಸಿ ದುಡಿಯುವ ಪದಾಧಿಕಾರಿಗಳನ್ನು ಗುರುತಿಸಿ ಜಿಲ್ಲೆಯ ಏಳು ತಾಲೂಕುಗಳಿಗೆ ಕಸಾಪ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಹೇಳಿದರು.
ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕಾರಿ ಸಭೆಯಲ್ಲಿ ನೂತನವಾಗಿ ಆಯ್ಕೆಯಾದ ಜಿಲ್ಲಾ ಕಾರ್ಯಕಾರಿ ಮಂಡಳಿಯ ಪದಾಧಿಕಾರಿಗಳ ನೇಮಕಾತಿ ಪತ್ರ ಹಾಗೂ ಎಲ್ಲ ತಾಲೂಕುಗಳ ಅಧ್ಯಕ್ಷರಿಗೆ ನೇಮಕಾತಿ ಪತ್ರಗಳನ್ನು ನೀಡಿ ಅವರು ಮಾತನಾಡಿದರು. ‘ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮುಂಬರುವ ದಿನಗಳಲ್ಲಿ ಸಾಹಿತ್ಯಿಕ ಚಟುವಟಿಕೆ ಚುರುಕುಗೊಳ್ಳಬೇಕಾಗಿದೆ. ಪದಾಧಿಕಾರಿಗಳು ಯುವ ಸಾಹಿತಿಗಳಿಗೆ, ಜಾನಪದದ ವಿವಿಧ ಪ್ರಕಾರಗಳ ಕಲಾವಿದರಿಗೆ, ಕವಿಗಳಿಗೆ, ಲೇಖಕರಿಗೆ ಅವಕಾಶಗಳನ್ನು ಕಲ್ಪಿಸುವುದರ ಮೂಲಕ ಕಾರ್ಯ ನಿರ್ವಹಿಸುತ್ತಾರೆ ಎನ್ನುವ ವಿಶ್ವಾಸವಿರಿಸಿ ಕಸಾಪ ಅಧ್ಯಕ್ಷರ ಅನುಮೋದಿತ ಪದಾಧಿಕಾರಿಗಳಿಗೆ ಆಯಾ ಸ್ಥಾನಗಳಲ್ಲಿ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ’ ಎಂದರು.
ಕಾರ್ಯಕಾರಿ ಸಭೆಯಲ್ಲಿ ಜಿಲ್ಲಾ ಹಂತದಲ್ಲಿ ಕಾರ್ಯಚಟುವಟಿಕೆ ಆಯೋಜಿಸುವ ಕುರಿತು, ತಾಲೂಕು ಕಾರ್ಯಕಾರಿ ಸಮಿತಿಗಳ ರಚನೆ ಹಾಗೂ ಪದಗ್ರಹಣ, ಜಿಲ್ಲಾ ಹಾಗೂ ತಾಲೂಕು ಹಂತದ ವಾರ್ಷಿಕ ಕ್ರಿಯಾಯೋಜನೆ ತಯಾರಿ, ಸಾಹಿತ್ಯ ಭವನಗಳ ನಿರ್ಮಾಣ ಮತ್ತು ಪ್ರಗತಿ ಕುರಿತು ಸಭೆಯಲ್ಲಿ ರ್ಚಚಿಸಲಾಯಿತು. ಜಿಲ್ಲಾ ಗೌರವ ಕಾರ್ಯದರ್ಶಿ ಶಿವಾನಂದ ಗಿಡ್ನಂದಿ, ಡಾ. ಕಿಶೋರಬಾಬು ನಾಗರಕಟ್ಟಿ, ಗೌರವ ಕೋಶಾಧ್ಯಕ್ಷ ವೀರಣ್ಣ ಮಾದರ, ಡಾ. ಅಕ್ಕಮಹಾದೇವಿ ರೊಟ್ಟಿಮಠ, ಎಸ್.ಎಂ. ಕಾತರಕಿ, ಪರಿಶಿಷ್ಟ ಜಾತಿ ಪ್ರತಿನಿಧಿ ವಿರೂಪಾಕ್ಷಪ್ಪ ಗೂರನವರ, ಶಿವಾನಂದ ಭಜಂತ್ರಿ, ಪರಿಶಿಷ್ಟ ಪಂಗಡದ ಪ್ರತಿನಿಧಿ ಗಿರೀಶ ಬಂಡಿಹಾಳ, ಸಂಘ-ಸಂಸ್ಥೆ ಪ್ರತಿನಿಧಿ ಸಿ. ಕೆ. ಎಚ್. ಶಾಸ್ತ್ರಿ (ಕಡಣಿ), ವಾರ್ತಾಧಿಕಾರಿ ವಸಂತ ಮದ್ಲೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ, ನಿಕಟಪೂರ್ವ ಅಧ್ಯಕ್ಷ ಶರಣು ಗೋಗೇರಿ ಅವರನ್ನು ನೇಮಕ ಮಾಡಲಾದ ವಿಷಯವನ್ನು ವಿವೇಕಾನಂದಗೌಡ ಪಾಟೀಲ ಸಭೆಯಲ್ಲಿ ವಿವರಿಸಿದರು. ಜಿಲ್ಲೆಯ ಗದಗ ತಾಲೂಕು ಅಧ್ಯಕ್ಷೆ ಡಾ. ರಶ್ಮಿ ಅಂಗಡಿ, ರೋಣ ಅಧ್ಯಕ್ಷ ರಮಾಕಾಂತ ಕಮತಗಿ, ಗಜೇಂದ್ರಗಡ ಅಧ್ಯಕ್ಷ ಅಮರೇಶ ಗಾಣಿಗೇರ, ಲಕ್ಷೆ್ಮೕಶ್ವರ ಅಧ್ಯಕ್ಷ ಈಶ್ವರ ಮೆಡ್ಲೇರಿ, ಶಿರಹಟ್ಟಿ ಅಧ್ಯಕ್ಷ ಎಸ್.ಬಿ. ಹೊಸೂರ, ನರಗುಂದ ಅಧ್ಯಕ್ಷ ಬಿ. ಸಿ. ಹನುಮಂತಗೌಡ್ರ, ಮುಂಡರಗಿ ಅಧ್ಯಕ್ಷ ಎಂ. ಜಿ. ಗಚ್ಚಣ್ಣವರ ಹೆಸರನ್ನು ಪ್ರಕಟಿಸಿ ಆದೇಶ ಪ್ರತಿಯನ್ನು ನೀಡಲಾಯಿತು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಶಿವಾನಂದ ಗಿಡ್ನಂದಿ ನಿರೂಪಿಸಿದರು. ವೀರಣ್ಣ ಮಾದರ ವಂದಿಸಿದರು. ಜಿಲ್ಲಾ ಸಲಹಾ ಸಮಿತಿ ಪದಾಧಿಕಾರಿಗಳಾದ ಕೆ.ಎಚ್. ಬೇಲೂರ, ಸಾಹಿತಿ ಡಾ.ಅನ್ನದಾನಿ ಹಿರೇಮಠ, ಡಾ. ಶಿವಪ್ಪ ಕುರಿ, ಸಾಹಿತಿ ಡಾ. ಎಚ್.ಬಿ. ಪೂಜಾರ, ಬಿಇಒ ಎಸ್.ಆರ್.ಹೂಗಾರ, ಡಿ.ಎಸ್. ತಳವಾರ ಕಾರ್ಯಕಾರಿ ಸಭೆಯಲ್ಲಿ ಪಾಲ್ಗೊಂಡು ಸಲಹೆ ನೀಡಿದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದ ಭಾರತ ಮಾತೆಯ ವೀರಪುತ್ರರಿಗೆ ಹಾಗೂ ಅಗಲಿದ ಸಾಹಿತಿ ಡಾ. ಚಂದ್ರಶೇಖರ ಪಾಟೀಲ, ಜಾನಪದ ಕಲಾವಿದ ಬಸಲಿಂಗಯ್ಯ ಹಿರೇಮಠ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net